ಮಂಗಳೂರು: ಮೂಡುಬಿದಿರೆ ತಾಲೂಕಿನ ಕಲ್ಲಬೆಟ್ಟು, ಕರಿಂಜೆ, ಗಂಟಾಲ್ಕಟ್ಟೆ ಮುಂತಾದೆಡೆ ಮಂಗಳವಾರದಿಂದ ಕಾಣಿಸಿಕೊಂಡಿದ್ದ ಕಾಡುಕೋಣ 'ಬೊಟುಲಿಸಂ' ಎಂಬ ಅಪರೂಪದ ಕಾಯಿಲೆಯಿಂದಾಗಿ ಚೇತರಿಕೆ ಕಾಣದೆ ಸಾವಿಗೀಡಾಗಿದೆ..
ಅಶಕ್ತ ಸ್ಥಿತಿಯಲ್ಲಿ ನಾಲಿಗೆ ಹೊರಚಾಚಿ ಆಹಾರ, ನೀರು ಸೇವಿಸಲಾಗದೆ ನಿತ್ರಾಣಗೊಂಡಿದ್ದ ಕೋಣವನ್ನು ಆರೈಕೆ ಮಾಡಿ, ಚಿಕಿತ್ಸೆ ನೀಡಲು ಶಿವಮೊಗ್ಗದ ವನ್ಯಜೀವಿ ಇಲಾಖೆಯ ವೈದ್ಯ ಡಾ.ವಿನಯ್ ಎಸ್. ಅರಣ್ಯಾಧಿಕಾರಿಯವರ ಕರೆಯ ಮೇರೆಗೆ ಬುಧವಾರ ಮೂಡುಬಿದಿರೆ ತಲುಪಿದ್ದರು. ಈ ವೇಳೆ, ಒಂದೆರಡು ದಿನಗಳ ಕಾಲ ಚಿಕಿತ್ಸೆ ನಡೆಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಔಷಧ ಪ್ರಕ್ರಿಯೆ ಆರಂಭಿಸುವ ಮೊದಲೇ ನಿನ್ನೆ ಕಾಡುಕೋಣ ಕೊನೆಯುರೆಳೆದಿದೆ. ಶವ ಮಹಜರು ನಡೆಸಿದ ಬಳಿಕ ನೀರಲ್ಕೆ ಸಮೀಪದ ಅರಣ್ಯದಲ್ಲಿ ಕಾಡುಕೋಣದ ಕಳೆಬರದ ಅಂತ್ಯಸಂಸ್ಕಾರ ನಡೆಸಲಾಗಿದೆ.
ಏನಿದು ಬೊಟುಲಿಸಂ ಕಾಯಿಲೆ?:
ಬೊಟುಲಿಸಂ ಎಂಬ ಕಾಯಿಲೆ ಕಾಡುಪ್ರಾಣಿಗಳಲ್ಲಿ ಕಂಡುಬರುವುದು ಅಪರೂಪ. ಬ್ಯಾಕ್ಟೀರಿಯಾದಿಂದ ಉತ್ಪಾದನೆಯಾದ ವಿಷ, ಕೋಣದ ದೇಹ ಸೇರಿ ನಾಲಿಗೆ ಹಾಗೂ ನರಗಳಿಗೆ ತೀವ್ರವಾದ ತೊಂದರೆ ಉಂಟುಮಾಡಿ ದೇಹದ ಅಂಗಾಂಗದ ಮೇಲೆ ನಿಯಂತ್ರಣ ಕಳೆದುಕೊಳ್ಳುವಂತೆ ಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ.