ಸುರತ್ಕಲ್(ದಕ್ಷಿಣ ಕನ್ನಡ): ಭಾನುವಾರ ಸಂತೆ ವ್ಯಾಪಾರ ನಡೆಸುತ್ತಿದ್ದವರನ್ನು ಯಾವುದೇ ಕಾರಣಕ್ಕೂ ಬೀದಿ ಪಾಲು ಮಾಡಬಾರದು. ಕಳೆದ 32 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದವರಿಗೆ ಮತ್ತೆ ಭಾನುವಾರ ಸಂತೆಗೆ ಅನುಮತಿ ನೀಡಬೇಕು. ಇಲ್ಲವಾದಲ್ಲಿ ಪಾಲಿಕೆ ವಿರುದ್ಧ ನಿರಂತರ ಹೋರಾಟ ಮಾಡಲಾಗುತ್ತದೆ ಎಂದು ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್ ಮಲ್ಲಿ ಎಚ್ಚರಿಕೆ ನೀಡಿದರು.
ಸುರತ್ಕಲ್ ನಲ್ಲಿ ಭಾನುವಾರ ನಡೆಯುತ್ತಿದ್ದ ಸಂತೆ ವ್ಯಾಪಾರವನ್ನು ಸ್ಥಗಿಗೊಳಿಸಿದವರ ವಿರುದ್ಧ ಇಂಟಕ್ ಆಯೋಜಿಸಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರೊಂದಿಗೆ ಚರ್ಚಿಸಿ ಜಿಲ್ಲಾಧಿಕಾರಿಯವರಿಗೆ ರವಿವಾರ ಸಂತೆಗೆ ಅನುಮತಿ ನೀಡಲು ಮನವಿ ಮಾಡಲಾಗುವುದು. ಅವಕಾಶ ನೀಡದಿದ್ದಲ್ಲಿ ಹೋರಾಟದ ಹಾದಿ ತುಳಿಯಬೇಕಾಗುತ್ತದೆ ಎಂದರು.
ಇದೇ ವೇಳೆ ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಮಾತನಾಡಿ, ಸುಪ್ರೀಂ ಕೋರ್ಟ್ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಿ ಎಂದು ಹೇಳಿದೆ. ಮಾತ್ರವಲ್ಲದೆ ಇದೀಗ ಆರ್ಥಿಕ ಸಹಾಯವನ್ನೂ ನೀಡಲಾಗುತ್ತಿದೆ. ಆದರೆ ಸುರತ್ಕಲ್ ನಲ್ಲಿ ಮಾತ್ರ ಮನಪಾ ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸುತ್ತಿದೆ. ಯಾವುದೇ ತೊಂದರೆ ಇಲ್ಲದೆ ವ್ಯಾಪಾರ ಮಾಡುವ ಬಡವರ ವಿರುದ್ಧ ಯಾಕೆ ದ್ವೇಷವಿದೆ ಎಂಬುದು ಅರ್ಥವಾಗುತ್ತಿಲ್ಲ. ಸ್ಟೇಟ್ ಬ್ಯಾಂಕ್ ನಲ್ಲಿ ನಿತ್ಯವೂ ವ್ಯಾಪಾರವಿದೆ. ಬಿಕರ್ನಕಟ್ಟೆಯಲ್ಲಿ ಸಂತೆಯಿದೆ. ಉತ್ತರ ಕರ್ನಾಟಕದಲ್ಲಿ ಸಾವಿರಾರು ಕುಟುಂಬಗಳು ಬದುಕಿನ ಹಾದಿ ಕಂಡುಕೊಂಡಿವೆ. ತಕ್ಷಣ ಪಾಲಿಕೆ ಭಾನುವಾರ ಸಂತೆ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದರು.