ಮಂಗಳೂರು (ದ.ಕ): ಮುಂದಿನ ವಿಧಾನಸಭಾ ಚುನಾವಣೆಗೂ ಮುಂಚೆ ಕನಿಷ್ಠ 100 ಕ್ಷೇತ್ರಗಳಲ್ಲಿ ಪ್ರವಾಸ ಮಾಡಲಾಗುವುದು. ಚುನಾವಣೆಗೆ ತುಂಬಾ ಮುಂಚಿತವಾಗಿಯೇ ಅಭ್ಯರ್ಥಿಗಳ ಘೋಷಣೆಯನ್ನು ಮಾಡುವ ಬಗ್ಗೆ ಪಕ್ಷದ ಪ್ರತಿನಿಧಿಗಳ ಸಮಾವೇಶದಲ್ಲಿ ಸಲಹೆಗಳು ಬಂದಿದ್ದು, ಮುಂದಿನ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಇದನ್ನು ಕಾರ್ಯಗತ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಪಾಣೆ ಮಂಗಳೂರಿನಲ್ಲಿರುವ ಸಾಗರ ಅಡಿಟೋರಿಯಂನಲ್ಲಿ ನಡೆದ ಮೈಸೂರು ವಿಭಾಗೀಯ ಮಟ್ಟದ ಪ್ರತಿನಿಧಿಗಳ ಸಮಾವೇಶದ ವೇಳೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷವು ಬರಿ ಅಧಿಕಾರಕ್ಕಾಗಿ ಇರುವ ಪಕ್ಷ ಅಲ್ಲ, ಅದಕ್ಕಾಗಿ ರಾಜಕಾರಣ ಮಾಡುತ್ತಿಲ್ಲ. ಮೌಲ್ಯ, ಸಿದ್ಧಾಂತವನ್ನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ದೂರ ಮಾಡುವುದಿಲ್ಲ ಎಂದರು.
ಪಕ್ಷವನ್ನು ಬಿಟ್ಟು ದೂರ ಹೋದವರನ್ನು ಮತ್ತೆ ವಾಪಸ್ ಕರೆಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಪಕ್ಷವನ್ನು ಕೇಡರ್ ಬೇಸ್ ಮಾಡುವ ಪ್ರಯತ್ನಗಳು ಆಗುತ್ತಿವೆ ಎಂದರು.
ಜೆಡಿಎಸ್ ಪಕ್ಷ ಮತ್ತು ನಮ್ಮದು ಬೇರೆ ಬೇರೆ. ಅವರ ಸಿದ್ಧಾಂತ ಬೇರೆ, ನಮ್ಮ ಸಿದ್ಧಾಂತ ಬೇರೆ. ಅವರ ನಿಲುವಿನ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
2021 ಕಾಂಗ್ರೆಸ್ ಪಕ್ಷಕ್ಕೆ ಸಂಘಟನೆಯ ಹೋರಾಟದ ವರ್ಷ. ಪ್ರತಿ ಮಾತಿನಲ್ಲಿಯೂ ಡಿಜಿಟಲ್ ಯೂಸ್ ಆಗಿರಬೇಕು ಎಂದು ನಾವು ನಿರ್ಧರಿಸಿದ್ದೇವೆ. ಇದನ್ನು ಮಾಡಲು ಬ್ಲಾಕ್ ಅಧ್ಯಕ್ಷರಿಗೆ ತಿಳಿಸಲಾಗಿದೆ. ಒಂದು ತಿಂಗಳ ಒಳಗೆ ಪಂಚಾಯತ್ ಕಮಿಟಿಯನ್ನು ಮಾಡಲಾಗುವುದು. ಮುಂದಿನ ವಿಧಾನಸಭಾ ಚುನಾವಣೆಗೂ ಮುಂಚೆ ಕನಿಷ್ಠ 100 ಕ್ಷೇತ್ರಗಳಲ್ಲಿ ಪ್ರವಾಸ ಮಾಡಲಾಗುವುದು ಎಂದು ಅವರು ತಿಳಿಸಿದರು.
ಇದನ್ನೂ ಓದಿ: 2021ರ ಪಂಚರಾಜ್ಯ ಚುನಾವಣೆ: ರಾಜ್ಯ ಕೈ ನಾಯಕರಿಗೆ ಹೆಚ್ಚಿನ ಹೊಣೆ ನೀಡಿದ ಹೈಕಮಾಂಡ್!