ಮಂಗಳೂರು: ಕೋವಿಡ್ನಿಂದ ಸಂಕಷ್ಟಕ್ಕೊಳಗಾಗಿರುವವರು ಸ್ವಸಾಮರ್ಥ್ಯದ ಮೇಲೆ ಮತ್ತೆ ಬದುಕು ಕಟ್ಟಿಕೊಳ್ಳುವುದಕ್ಕಾಗಿ ಜಾತಿ, ಮತ ಭೇದ ನೋಡದೆ ನಾವು ಈ ತಳ್ಳುಗಾಡಿ ವಿತರಣೆ ಮಾಡಿದ್ದೇವೆ ಎಂದು ಕಾಂಗ್ರೆಸ್ ಸದಸ್ಯ ವಿವೇಕ್ ರಾಜ್ ಪೂಜಾರಿ ಹೇಳಿದ್ದಾರೆ.
ದ.ಕ ಜಿಲ್ಲಾ ಕಾಂಗ್ರೆಸ್ ಕೋವಿಡ್-19 ಹೆಲ್ಪ್ ಲೈನ್ ಘಟಕದಿಂದ ಇಬ್ಬರು ವಿಕಲಚೇತನರು ಸೇರಿ ಹತ್ತು ಮಂದಿ ಫಲಾನುಭವಿಗಳಿಗೆ ತಳ್ಳುಗಾಡಿ ವಿತರಿಸಲಾಯಿತು.
ಕಾಂಗ್ರೆಸ್ ಸದಸ್ಯ, ಪನಮಾ ಕಾರ್ಪೊರೇಷನ್ ಲಿ. ಸಿಇಒ ವಿವೇಕ್ ರಾಜ್ ಪೂಜಾರಿ ಉಚಿತವಾಗಿ ನೀಡಿರುವ ಈ ತಳ್ಳುಗಾಡಿಯನ್ನು ಕಾಂಗ್ರೆಸ್ ಕೋವಿಡ್-19 ಹೆಲ್ಪ್ ಲೈನ್ ಘಟಕದ ವತಿಯಿಂದ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರ ಉಪಸ್ಥಿತಿಯಲ್ಲಿ ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯ ಮುಂಭಾಗ ವಿತರಣೆ ಮಾಡಲಾಯಿತು. ಫಲಾನುಭವಿಗಳಲ್ಲಿ ಐವರು ಮಹಿಳೆಯರು, ಇಬ್ಬರು ವಿಕಲ ಚೇತನರಿದ್ದರು.
ಇದನ್ನೂ ಓದಿ: ‘ಎರಡು ರಾಜ್ಯದ ಸಿಎಂಗಳು ನಿಮ್ಮ ಬೆನ್ನಿಗಿದ್ದಾರೋ, ಕಾಲು ಕೆಳಗಿದ್ದಾರೋ ಗೊತ್ತಿಲ್ಲ'
ಬಡ ಬೀದಿಬದಿ ವ್ಯಾಪರಸ್ಥರಿಗೆ ಹಣ್ಣು ಹಾಗೂ ತರಕಾರಿ ಮಾರಲು ಈ ತಳ್ಳುಗಾಡಿಯನ್ನು ಉಚಿತವಾಗಿ ವಿತರಣೆ ಮಾಡಲಾಗಿದ್ದು, ಮಾರಾಟಕ್ಕೆ ಬೇಕಾಗುವ ವಸ್ತುಗಳಿಗೂ ಕೇಂದ್ರ ಸರ್ಕಾರದ 'ಆತ್ಮ ನಿರ್ಭರ' ಯೋಜನೆಯಡಿ ಪಿಎಂ ಸ್ವನಿಧಿ ಯೋಜನೆಯಡಿ 10 ಸಾವಿರ ರೂ. ಸಾಲ ಒದಗಿಸಿ ಕೊಡಲಾಗುತ್ತದೆ ಎಂದು ಫಲಾನುಭವಿಗಳಿಗೆ ಕಾಂಗ್ರೆಸ್ ಭರವಸೆ ನೀಡಿದೆ.