ಮಂಗಳೂರು(ದಕ್ಷಿಣ ಕನ್ನಡ): ಈ ಬಾರಿ ಮಳೆ ವಿಳಂಬದಿಂದ ಮಂಗಳೂರು ನಗರದಲ್ಲಿ ನೀರಿಗೆ ಸಂಕಷ್ಟ ತಲೆದೋರಿದ್ದು, ಜನತೆ ಭಾರೀ ತೊಂದರೆಗೊಳಗಾಗಿದ್ದಾರೆ. ಮಂಗಳೂರು ನಗರಕ್ಕೆ ನೀರು ಸರಬರಾಜು ಮಾಡುವ ತುಂಬೆ ಡ್ಯಾಂ ನಲ್ಲಿ ನೀರು ಖಾಲಿಯಾಗಿದ್ದು, ಅಡ್ಯಾರ್ ಡ್ಯಾಂ ನಲ್ಲಿ ಶೇಖರವಾದ ನೀರನ್ನು ಪಂಪ್ ಮಾಡಿ ತುಂಬೆ ಡ್ಯಾಂಗೆ ನೀರು ಹರಿಸಲಾಗಿದೆ. ತುಂಬೆ ಡ್ಯಾಂನಿಂದ ಸದ್ಯ ಮಂಗಳೂರಿಗೆ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಎಂಆರ್ ಡ್ಯಾಂನಿಂದ ಈಗಾಗಲೇ ನೀರು ಬಿಡಲಾಗಿದ್ದು, ಆ ನೀರು ತುಂಬೆ ಡ್ಯಾಂಗೆ ಸೇರಿದೆ.
ಇದರಿಂದ ತುಂಬೆ ಡ್ಯಾಂನಲ್ಲಿ 4 ಮೀಟರ್ ನೀರು ತುಂಬಿದೆ. ದ.ಕ ಜಿಲ್ಲೆಯಲ್ಲಿ ವರ್ಷಂ ಪ್ರತಿ ಜೂನ್ ತಿಂಗಳಲ್ಲಿ ಅಬ್ಬರದ ಮಳೆ ಬರುತ್ತದೆ. ಆದರೆ ಈ ಬಾರಿ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಮಳೆ ನಿರೀಕ್ಷಿತ ಸಮಯಕ್ಕೆ ಬಂದಿಲ್ಲ. ಅಲ್ಲದೇ ಈಗಾಗಲೇ ಸುಡುಬಿಸಿಲಿನಿಂದ ಜನರು ತತ್ತರಿಸುತ್ತಿದ್ದು, ಕುಡಿಯುವ ನೀರಿಗೂ ಎಲ್ಲೆಡೆ ಹಾಹಾಕಾರ ಉಂಟಾಗಿದೆ. ಸದ್ಯ ತುಂಬೆ ಡ್ಯಾಂನಲ್ಲಿ 1.86 ಮೀ. ಮಟ್ಟಕ್ಕೆ ನೀರು ಇಳಿದಿದೆ.
ಪರಿಣಾಮ ಮಂಗಳೂರು ನಗರದಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಕಳೆದ ಎರಡು ದಿನಗಳ ಕಾಲ ಪೈಪ್ ಲೈನ್ ಹಾಗೂ ಮೋಟಾರ್ ರಿಪೇರಿ ಕಾಮಗಾರಿ ಹಿನ್ನೆಲೆ ಎರಡು ದಿನಗಳ ನೀರು ಪೂರೈಕೆಯಾಗದೆ ಸಮಸ್ಯೆ ಉಂಟಾಗಿತ್ತು.ಆದರೂ ಜಿಲ್ಲಾಡಳಿತ ಶಾಲಾ, ಕಾಲೇಜು ಸೇರಿ ಎಲ್ಲಾ ಕಡೆ ನೀರು ಪೂರೈಸಲು ವ್ಯವಸ್ಥೆ ಮಾಡಲಾಗುತ್ತಿದೆ. ಆದರೂ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಖಾಸಗಿ ಬೋರ್ ವೆಲ್ ಮೂಲಕ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಟ್ಯಾಂಕರ್ ಮೂಲಕವೂ ನೀರಿನ ಪೂರೈಕೆ ಆಗುತ್ತಿದೆ. ಹವಾಮಾನ ವರದಿಯಂತೆ ಮೂರ್ನಾಲ್ಕು ದಿನ ಮಳೆ ಆಗುವ ಮುನ್ಸೂಚನೆ ದೊರಕಿದೆ. ಈ ಮೂಲಕ ನೀರಿನ ಸಮಸ್ಯೆ ಬಗೆಹರಿಯಬಹುದೆಂದು ನಿರೀಕ್ಷಿಸಲಾಗಿದೆ.
ನೀರಿಗೆ ಹಾಹಾಕಾರ: ಮಂಗಳೂರು ವಿವಿ ಕಾಲೇಜಿಗೆ ಒಂದು ದಿನದ ರಜೆ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ನೀರಿಗೆ ಭಾರೀ ಸಂಕಷ್ಟ ತಲೆದೋರಿದೆ. ಇದೀಗ ನೀರಿನ ತತ್ವಾರವನ್ನು ಎದುರಿಸಲಾಗದೆ ಮಂಗಳೂರಿನ ವಿವಿ ಕಾಲೇಜಿಗೆ ಆಡಳಿತ ಮಂಡಳಿ ಒಂದು ದಿನ ರಜೆ ಘೋಷಿಸಿತ್ತು. ಎರಡು ದಿನಗಳ ಕಾಲ ಪೈಪ್ ಲೈನ್ ಹಾಗೂ ಮೋಟಾರ್ ರಿಪೇರಿ ಕಾಮಗಾರಿ ಹಿನ್ನೆಲೆ ಎರಡು ದಿನಗಳ ನೀರು ಪೂರೈಕೆಯಾಗದೆ ನೀರಿನ ಕೊರತೆಯಾದ ಕಾರಣ ಬುಧವಾರ ಕಾಲೇಜಿಗೆ ರಜೆ ಘೋಷಣೆ ಮಾಡಿ ಆನ್ ಲೈನ್ನಲ್ಲಿ ಪಾಠ ಮಾಡಲಾಯಿತು.
ದ.ಕ ಜಿಲ್ಲೆಯ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ನೀರಿನ ಸಮಸ್ಯೆಯಿಂದ ರಜೆ ಘೋಷಣೆಯಾಗಿದೆ. ಕೆಲವೆಡೆ ಅರ್ಧ ದಿನ ಮಾತ್ರ ತರಗತಿ ನಡೆಯುತ್ತಿದೆ. ಕೆಲ ಕಾಲೇಜುಗಳಲ್ಲಿ ಆನ್ ಲೈನ್ ತರಗತಿ ನಡೆಸಲಾಗುತ್ತಿದೆ. ಮಂಗಳೂರು ನಗರ, ಗ್ರಾಮಾಂತರ ಭಾಗದಲ್ಲಿ ರೇಷನಿಂಗ್ ಆಧಾರದಲ್ಲಿ ನೀರಿನ ಸರಬರಾಜು ಆಗುತ್ತಿರುವುದರಿಂದ ಮನೆಗಳು, ಕಚೇರಿಯೊಂದಿಗೆ ಶೈಕ್ಷಣಿಕ ಸಂಸ್ಥೆಗಳಲ್ಲೂ ನೀರಿಗಾಗಿ ಪರದಾಟ ಶುರುವಾಗಿದೆ. ಆದ್ದರಿಂದ ಶಾಲಾ - ಕಾಲೇಜುಗಳಿಗೆ ರಜೆ ಘೋಷಿಸುವ ನಿರ್ಧಾರಕ್ಕೆ ಆಡಳಿತ ಮಂಡಳಿ ಮುಂದಾಗುತ್ತಿದೆ.
ಕಟೀಲು ದೇವಸ್ಥಾನದಲ್ಲಿ ಜಲಕ್ಷಾಮ: ನಂದಿನಿ ನದಿ ಸಂಪೂರ್ಣ ಬತ್ತಿದ್ದು, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜಲಕ್ಷಾಮವುಂಟಾಗಿದೆ. ದೇವಸ್ಥಾನದ ದೈನಂದಿನ ಚಟುವಟಿಕೆಗೆ ಅಡ್ಡಿಯಾಗಿದ್ದು, ಕ್ಷೇತ್ರದ ಶಿಕ್ಷಣ ಸಂಸ್ಥೆಗಳ ಪ್ರಾಥಮಿಕ-ಪ್ರೌಢ ವಿಭಾಗಗಳಲ್ಲಿ ಬೆಳಿಗ್ಗೆ ಮಾತ್ರ ತರಗತಿ ನಡೆಸಿ ಮಧ್ಯಾಹ್ನದ ನಂತರ ರಜೆ ನೀಡಲಾಗಿದೆ. ಭಕ್ತರು ದೇವಸ್ಥಾನದೊಳಗೆ ಪ್ರವೇಶಿಸುವಾಗ ಕೈ-ಕಾಲು ತೊಳೆಯುವ ನೀರನ್ನು ಬಂದ್ ಮಾಡಲಾಗಿದೆ. ಬೆಳಗ್ಗೆ ಗಂಜಿ, ಮಧ್ಯಾಹ್ನ ಹಾಗೂ ರಾತ್ರಿ ಸಮಯದಲ್ಲಿ ಅನ್ನಪ್ರಸಾದಕ್ಕೆ ಸ್ಟೀಲ್ ತಟ್ಟೆಗಳ ಬದಲಿಗೆ ಹಾಳೆತಟ್ಟೆಯನ್ನು ಬಳಸಲಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ ಆರ್ ಈ ಕುರಿತು, ತುಂಬೆ ಡ್ಯಾಂಗೆ ಎಎಂಆರ್ ಡ್ಯಾಂ ನಿಂದ ನೀರು ಹರಿಸಲಾಗಿದೆ. ನೀರಿನ ಕೊರತೆ ಕಾರಣದಿಂದ ಯಾವುದೇ ಶಿಕ್ಷಣ ಸಂಸ್ಥೆ ಗೆ ರಜೆ ನೀಡಲಾಗಿಲ್ಲ. ಡ್ಯಾಂ ನಲ್ಲಿ ದುರಸ್ತಿಯ ಹಿನ್ನೆಲೆಯಲ್ಲಿ ಜೂನ್ 4 ಮತ್ತು 5 ರಂದು ನೀರು ಸರಬರಾಜು ಆಗಿರಲಿಲ್ಲ. ಇದೀಗ ಎರಡು ದಿನಕ್ಕೊಮ್ಮೆ ನೀರು ಹರಿಸಲಾಗುತ್ತಿದ್ದು, ಎಲ್ಲಿಯೇ ನೀರಿನ ಸಮಸ್ಯೆಯಾದರೂ ಪೂರೈಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಅರಬ್ಬೀ ಸಮುದ್ರದಲ್ಲಿ ಬಿಪೊರ್ ಜಾಯ್ ಚಂಡಮಾರುತ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಲರ್ಟ್