ಉಳ್ಳಾಲ(ದಕ್ಷಿಣ ಕನ್ನಡ): ವಾರೆಂಟ್ ಹಿಡಿದು ಆರೋಪಿಯನ್ನು ಬಂಧಿಸಲು ಹೋದ ಉಳ್ಳಾಲ ಠಾಣೆಯ ನಾಲ್ವರು ಪೊಲೀಸ್ ಸಿಬ್ಬಂದಿಗೆ ರೌಡಿಶೀಟರ್ ತಲ್ವಾರ್ ತೋರಿಸಿ ಪರಾರಿಯಾದ ಘಟನೆ ಉಳ್ಳಾಲದ ಧರ್ಮನಗರದಲ್ಲಿ ನಡೆದಿದೆ.
ಧರ್ಮನಗರ ನಿವಾಸಿ ಮುಖ್ತಾರ್ ಅಹ್ಮದ್ ಎಂಬಾತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದರು. ಈತನ ಮೇಲೆ ಹತ್ತಕ್ಕೂ ಹೆಚ್ಚು ಕೇಸ್ಗಳಿದ್ದು, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಹೀಗಾಗಿ ಉಳ್ಳಾಲ ಪೊಲೀಸರು ಕೋರ್ಟಿನಿಂದ ವಾರೆಂಟ್ ಪಡೆದು ಇಂದು ಬೆಳಗ್ಗೆ ಬಂಧಿಸಲು ಧರ್ಮನಗರದಲ್ಲಿರುವ ಆರೋಪಿ ಮನೆಗೆ ತೆರಳಿದ್ದರು.
ಈ ವೇಳೆ ತಲ್ವಾರ್ ತೋರಿಸುತ್ತಲೇ ಹೊರ ಬಂದ ಆರೋಪಿ ಅಲ್ಲೆ ಇದ್ದ ನಿಜಾಮುದ್ದೀನ್ ಎಂಬುವನ ಬೈಕ್ ಹತ್ತಿ ಪರಾರಿಯಾಗಿದ್ದ. ತಕ್ಷಣ ಆರೋಪಿಯನ್ನು ಬೆನ್ನಟ್ಟಿದ ಪೊಲೀಸರು, ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿಯ ರಸ್ತೆಯಲ್ಲಿ ಅಡ್ಡಹಾಕಿ ಬೈಕ್ ಹಿಡಿದಿದ್ದಾರೆ. ಆದರೆ ಈ ನಡುವೆ ಮುಕ್ತಾರ್, ಬೈಕಿನಿಂದ ಇಳಿದು ಪೊಲೀಸರ ಕಣ್ತಪ್ಪಿಸಿ ಎಸ್ಕೇಪ್ ಆಗಿದ್ದಾನೆ.
ಬೈಕಿನಲ್ಲಿದ್ದ ನಿಜಾಮುದ್ದೀನ್ ಪೊಲೀಸರು ಹಿಂಬಾಲಿಸಿ ಬಂದಿದ್ದನ್ನು ತಿಳಿದು ಎಸ್ಕೇಪ್ ಆಗುವ ಯತ್ನದಲ್ಲಿ ಮುಂದಿನಿಂದ ಬಂದ ವ್ಯಾಗನರ್ ಕಾರಿಗೆ ಡಿಕ್ಕಿ ಹೊಡೆದು ರಸ್ತೆಯಲ್ಲೆ ಬಿದ್ದಿದ್ದನು. ಈ ವೇಳೆ ಖಾಕಿ ಪಡೆ ಆತನನ್ನು ಬಂಧಿಸಿದೆ. ಈತ ಇಲ್ಯಾಸ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ದಾವೂದ್ ಎಂಬಾತನ ಸಹೋದರನಾಗಿದ್ದಾನೆ. ಆತನ ಕ್ರಿಮಿನಲ್ ಹಿನ್ನೆಲೆಯ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಸ್ವಲ್ಪದರಲ್ಲೇ ತಪ್ಪಿದ ಸಿಬ್ಬಂದಿ :
ಆರೋಪಿ ತಲವಾರು ತೋರಿಸಿ ಬೈಕಿನಲ್ಲಿ ಪರಾರಿಯಾಗುವಷ್ಟರಲ್ಲಿ ಸಿಬ್ಬಂದಿ ವಾಸು ಅಡ್ಡಹೋಗಿದ್ದು, ಆರೋಪಿ ಮುಕ್ತಾರ್ ತಲವಾರು ಬೀಸಲು ಯತ್ನಿಸಿದ್ದನು. ತಕ್ಷಣ ತಪ್ಪಿಸಿಕೊಂಡ ಸಿಬ್ಬಂದಿ ವಾಸು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಮುಂಗಾರು ಅಬ್ಬರ ಮುಗಿತು..ಇಂದಿನಿಂದ ಹಿಂಗಾರು ಮಳೆ ಶುರು