ಬಂಟ್ವಾಳ: ಬಂಟ್ವಾಳ ತಾಲೂಕಿನ ಎಎಂಆರ್ ಅಣೆಕಟ್ಟಿನಿಂದ ನೀರು ಹೊರ ಬಿಡುವ ಸಾಧ್ಯತೆ ಇರುವ ಕಾರಣ, ನದಿ ತೀರದ ಜನರಿಗೆ ಧ್ವನಿವರ್ಧಕದ ಮೂಲಕ ಮುನ್ನೆಚ್ಚರಿಕೆ ನೀಡಲಾಗುತ್ತಿದೆ.
ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ಮಡಿಮುಗೇರಿನಲ್ಲಿ ನೇತ್ರಾವತಿ ನದಿಗೆ ಅಡ್ಡವಾಗಿ ಕಟ್ಟಿರುವ ಎಎಂಆರ್ ಅಣೆಕಟ್ಟಿನಲ್ಲಿ ಮಳೆಯ ಪ್ರಮಾಣಕ್ಕೆ ಅನುಗುಣವಾಗಿ ಮೇ 31ರಿಂದ ನೀರನ್ನು ಶೇಖರಿಸಲು ಉದ್ದೇಶಿಸಲಾಗಿದೆ. ನದಿ ನೀರಿನ ಮಟ್ಟ ಏರುವುದರಿಂದ ನದಿ ತೀರದ ಜನರು ಮುಂಜಾಗರೂಕತೆ ವಹಿಸಬೇಕು ಎಂದು ಸ್ಥಳೀಯ ಆಡಳಿತದಿಂದ ಮನವಿ ಮಾಡಲಾಗಿದೆ.
ಮೇ 31ರಿಂದ ನದಿಯ ಅಣೆಕಟ್ಟಿನ ಕೆಳಭಾಗದ ಹಾಗೂ ಮೇಲ್ಭಾಗದ ಇಕ್ಕೆಲಗಳಲ್ಲಿ ನೀರಿನ ಮಟ್ಟ ಮಳೆಯ ಪ್ರಮಾಣಕ್ಕೆ ಅನುಗುಣವಾಗಿ ಏರಿಳಿತವಾಗುವುದರಿಂದ ನದಿಯ ದಡದಲ್ಲಿ ವಾಸಿಸುವ ಜನರಿಗೆ ಸಂರಕ್ಷಣೆಯ ವಿಷಯವಾಗಿ ಮುಂಜಾಗರೂಕತೆ ವಹಿಸುವಂತೆ ತಿಳಿಹೇಳಲು ಬಂಟ್ವಾಳ ತಹಶೀಲ್ದಾರ್ ಮತ್ತು ದ.ಕ. ಜಿಲ್ಲಾಧಿಕಾರಿಗೆ ಎಎಂಆರ್ ವಿನಂತಿಸಿದೆ.
ಅಣೆಕಟ್ಟು ವ್ಯಾಪ್ತಿಗೆ ಒಳಪಡುವ ಗ್ರಾಮಗಳಾದ ನರಿಕೊಂಬು, ತುಂಬೆ, ಕಡೇಶಿವಾಲಯ, ಬಾಳ್ತಿಲ, ಸಜಿಪಮೂಡ, ನಾವೂರು, ಸರಪಾಡಿ, ಬರಿಮಾರು, ಸಜಿಪಮುನ್ನೂರು ಗ್ರಾಮಗಳ ಪಿಡಿಒಗಳಿಗೂ ಎಎಂಆರ್ ಪತ್ರ ಮುಖೇನ ಮಾಹಿತಿ ನೀಡಿದ್ದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.