ಮಂಗಳೂರು: ಲಾಕ್ ಡೌನ್ ಬಳಿಕ ಏನೇನು ಮುಂಜಾಗ್ರತೆ ಕಾರ್ಯಗಳನ್ನು ಮಾಡಬೇಕು ಎಂಬ ವಿಚಾರವಾಗಿ ಮಂಗಳೂರು ವಿವಿ ಮಟ್ಟದ ರಾಷ್ಟ್ರೀಯ ಸೇವಾಯೋಜನಾ ಸ್ವಯಂ ಸೇವಕರು ಆನ್ ಲೈನ್ನಲ್ಲಿ ಕಾರ್ಯಾಗಾರ ನಡೆಸಿದರು. ಮಂಗಳೂರು ವಿವಿ ಜೊತೆಗೆ ಕೆನರಾ ಕಾಲೇಜು ಕೂಡ ಭಾಗಿಯಾಗಿತ್ತು.
ರಾಜ್ಯ ರಾ.ಸೇ.ಯೋಜನಾ ಅಧಿಕಾರಿಗಳು ಮತ್ತು ಕರ್ನಾಟಕ ಸರ್ಕಾರದ ಪದನಿಮಿತ್ತ ಜಂಟಿ ಕಾರ್ಯದರ್ಶಿ ಡಾ.ಗಣನಾಥ ಶೆಟ್ಟಿ ಎಕ್ಕಾರು ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪೂರ್ವಜರ ನಡೆನುಡಿಗಳಲ್ಲಿ ಇವತ್ತಿನ ಸವಾಲಿಗೆ ಉತ್ತರವಿದೆ. ಮಿತ ವೆಚ್ಚ, ಹಿತ ಆಹಾರ, ಸ್ವಚ್ಛ ಆಚಾರ, ಪ್ರಕೃತಿಯ ಜೊತೆಗಿನ ಬದುಕು ಇವುಗಳಿಗೆ ಒತ್ತು ನೀಡಬೇಕು ಎಂದು ಹೇಳಿದರು.
ರಾ.ಸೇ.ಯೋಜನಾ ರಾಜ್ಯ ಅನುಷ್ಠಾನಾಧಿಕಾರಿ ಡಾ. ಪೂರ್ಣಿಮಾ ಜೋಗಿ ಮಾತನಾಡಿ, ಸರ್ಕಾರದ ನಿರ್ದೇಶನಗಳನ್ನು ಪಾಲಿಸಿ, ಅಲ್ಲದೆ ನಿಮ್ಮದೇ ನಿಟ್ಟಿನಲ್ಲಿ ಕೊರೊನಾ ಯೋಧರಾಗಿ ದೇಶ ಸೇವೆ ಮಾಡಿ ಎಂದು ಹೇಳಿದರು.
ಈ ವೇಳೆ ವಿ.ವಿ. ರಾ.ಸೇ.ಯೋಜನಾ ಸಂಯೋಜನಾಧಿಕಾರಿ ಡಾ. ನಾಗರತ್ನ ಕೆ.ಎ. ಹಾಗೂ ದ.ಕ. ಜಿಲ್ಲಾ ಕೋವಿಡ್-19 ನೋಡಲ್ ಅಧಿಕಾರಿ ದೇವಿಪ್ರಸಾದ್, ಫಾ. ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಡಾ.ಅವಿನಾಶ್ ಜೊ, ಕೆನರಾ ಕಾಲೇಜು ಪ್ರಾಂಶುಪಾಲೆ ಡಾ. ಕೆ.ವಿ.ಮಾಲಿನಿ ಸೇರಿದಂತೆ ಹಲವರು ಕಾರ್ಯಾಗಾರದಲ್ಲಿ ಭಾಗಿಯಾಗಿದ್ದರು.