ಬೆಳ್ತಂಗಡಿ/ದಕ್ಷಿಣ ಕನ್ನಡ: ಕೊರೊನಾ ‘ಹೋಮ್ ಕ್ವಾರಂಟೈನ್’ ನಿಯಮ ಪಾಲಿಸದ ವ್ಯಕ್ತಿಯ ವಿರುದ್ಧ ಬೆಳ್ತಂಗಡಿ ಪೊಲೀಸರು ದೂರು ದಾಖಲಿಸಿದ್ದಾರೆ.
ವಿದೇಶದಿಂದ ಊರಿಗೆ ಮರಳಿದ್ದ ಬೆಳ್ತಂಗಡಿ ತಾಲೂಕಿನ ನ್ಯಾಯತರ್ಪು ಗ್ರಾಮದ ನಾಳ ದೇವಸ್ಥಾನದ ಸಮೀಪದ ನಿವಾಸಿಯನ್ನು ಕೊರೊನಾ ಸೋಂಕು ಶಂಕೆಯ ಮೇರೆಗೆ ಹೋಮ್ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಈತ ಮನೆಯೊಳಗೆ ಪ್ರತ್ಯೇಕವಾಗಿ ಇರುವುದು ಬಿಟ್ಟು ಸುರಕ್ಷತಾ ಕ್ರಮಗಳನ್ನು ಪಾಲಿಸದೆ, ಮಾಸ್ಕ್ ಧರಿಸದೆ ಹೊರಗೆ ಓಡಾಡುತ್ತಿದ್ದ ಎನ್ನಲಾಗಿದೆ. ನಿಗಾದಲ್ಲಿರುವ ವ್ಯಕ್ತಿಗಳ ತಪಾಸಣೆ ಕರ್ತವ್ಯಕ್ಕೆ ತೆರಳಿದ ಪೊಲೀಸ್ ಸಿಬಂದಿ ಗಂಗಾಧರ್ ಹೆಚ್.ಸಿ., ಮಹಿಳಾ ಸಿಬಂದಿ ಚೈತ್ರಾ ಹಾಗೂ ತಾಲೂಕು ಆಸ್ಪತ್ರೆಯ ಕಮಲಾ ಸುರಕ್ಷತಾ ಕ್ರಮ ಪಾಲಿಸದ ಕುರಿತು ಪ್ರಶ್ನಿಸಿದಾಗ, ಕ್ವಾರಂಟೈನ್ ವ್ಯಕ್ತಿ ಹಾಗೂ ಆತನ ಮನೆಯಲ್ಲಿದ್ದ ಮಸೂದ್ ಅಲಿ, ಬಾತಿಷ್ ಆಲಿ, ಅಕ್ಬರ್ ಆಲಿ ಎಂಬವರು ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಶಂಕಿತ ಮತ್ತು ಸಹಚರರ ವರ್ತನೆ ವಿರುದ್ಧ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ವರದಿ ಸಲ್ಲಿಸಿದರ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರರಣ ದಾಖಲಿಸಿದ್ದಾರೆ.