ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡುಗೆ ಮನೆಯ ಇಂಧನವಾಗಿ ಪಿಎನ್ಜಿ ಸಂಪರ್ಕವನ್ನು ಸುಮಾರು10 ಸಾವಿರ ಮನೆಗಳಿಗೆ ವಿಸ್ತರಿಸಲು ಗೇಲ್ ಗ್ಯಾಸ್ ಲಿಮಿಟೆಡ್ ಸಂಸ್ಥೆ ಯೋಜನೆ ಕೈಗೊಂಡಿದೆ. ಆದ್ದರಿಂದ ನಗರದ ಕದ್ರಿ, ಬಿಜೈ, ದೇರಬೈಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ ಎಂದು ಗೇಲ್ ಗ್ಯಾಸ್ ಲಿ. ಸಂಸ್ಥೆಯ ಡಿಜಿಎಂ ವಿನಿಲ್ ಜುಂಕೆ ಹೇಳಿದರು.
ಮಂಗಳೂರು ಮನಪಾದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ದ.ಕ. ಜಿಲ್ಲೆಯಲ್ಲಿ ಈಗಾಗಲೇ ಸಿಜಿಡಿ ಯೋಜನೆಯ ಮೂಲಕ 100 ಸಿಎನ್ಜಿ ಕೇಂದ್ರಗಳು ಹಾಗೂ ಸುಮಾರು 3,50,000 ಮನೆಗಳು ಪೈಪ್ ಮೂಲಕ ನೈಸರ್ಗಿಕ ಅನಿಲ ಸಂಪರ್ಕವನ್ನು ಹೊಂದಿವೆ. ಈ ಯೋಜನೆಯನ್ನು ಜಿಲ್ಲೆಯಲ್ಲಿ 1,250 ಇಂಚು ಕಿ.ಮೀ ವಿಸ್ತರಿಸಲಾಗುವುದು. ಇದರಿಂದ ಜಿಲ್ಲೆಯ 20 ಲಕ್ಷ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ರು.
ಈ ವರ್ಷ ಸುಮಾರು 10 ಸಿಎನ್ಜಿ ಕೇಂದ್ರಗಳನ್ನು ನಿರ್ಮಿಸಲು ಗೇಲ್ ಗ್ಯಾಸ್ ಲಿಮಿಟೆಡ್ ಸಂಸ್ಥೆ ಯೋಜನೆ ಕೈಗೊಂಡಿದ್ದು, ಈಗಾಗಲೇ ಚಟುವಟಿಕೆ ಆರಂಭಿಸಲಾಗಿದೆ. ಪರಿಸರ ಮಾಲಿನ್ಯ ಕಡಿಮೆ ಮಾಡಲು ಹಾಗೂ ಶುದ್ಧ ಇಂಧನವನ್ನು ಜನತೆಗೆ ಪೂರೈಸುವ ಉದ್ದೇಶದಿಂದ ಈ ಯೋಜನೆಯನ್ನು ಗೇಲ್ ಗ್ಯಾಸ್ ಲಿಮಿಟೆಡ್ ಸಂಸ್ಥೆ ಕಾರ್ಯಗತಗೊಳಿಸುತ್ತಿದೆ ಎಂದು ವಿಲಿನ್ ಜುಂಕೆ ಮಾಹಿತಿ ನೀಡಿದ್ರು.