ಬೆಳ್ತಂಗಡಿ (ದ.ಕ) : ಶಿಶಿಲ ಗ್ರಾಮ ಪಂಚಾಯತ್ ಸುಮಾರು ₹25 ಲಕ್ಷ ಮೊತ್ತದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಿದೆ. ಅದು ಸಂಪೂರ್ಣ ಕಳಪೆಯಾಗಿದ್ದು ಉದ್ಘಾಟನೆ ಮುಂಚೆಯೇ ನೀರು ಸೋರಿಕೆಯಾಗುತ್ತಿದೆ.
ಅಲ್ಲದೆ ಸುಸಜ್ಜಿತ ಶೌಚಾಲಯ ಇಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು. ಅದೇ ಕಟ್ಟಡದಲ್ಲಿ ನಾಮಕಾವಸ್ಥೆಗೆ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಅದರಲ್ಲಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಕೂಡ ಇಲ್ಲ. ಶಿಶಿಲಕ್ಕೆ ಸುಸಜ್ಜಿತವಾದ ಬಸ್ ನಿಲ್ದಾಣ ಹಾಗೂ ಶೌಚಾಲಯ ನಿರ್ಮಿಸುವಂತೆ ಒತ್ತಾಯ ಮಾಡಿದರು.
ನಂತರ ಮಧ್ಯ ಪ್ರವೇಶಿಸಿದ ತಾಲೂಕು ಪಂಚಾಯತ್ ಅಧ್ಯಕ್ಷೆ ದಿವ್ಯ ಜ್ಯೋತಿಯವರು ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಿ ಕೊಡುವ ಭರವಸೆ ನೀಡಿ ಜನರನ್ನು ಸಮಾಧಾನ ಪಡಿಸಿದರು. ಗ್ರಾಮಸ್ಥರಾದ ತಿಲಕ್ ಶಿಶಿಲ ಮಾತನಾಡಿ, ಗ್ರಾಮಸ್ಥರಿಗಾಗಲಿ, ಶಾಸಕರಿಗಾಗಲಿ ಯಾವುದೇ ಮಾಹಿತಿ ನೀಡದೆ ತರಾತುರಿಯಲ್ಲಿ ಕಟ್ಟಡ ಉದ್ಘಾಟನೆ ಮಾಡುವ ಅವಶ್ಯಕತೆ ಏನಿತ್ತು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮ ಪಂಚಾಯತ್ ಸದಸ್ಯರಾದ ರಾಜರಾಮ್ ನಾವು ಈಗಾಗಲೇ 4 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಾಣ ಮಾಡಲು ನಿರ್ಧರಿಸಿದ್ದೇವೆ. ಅದನ್ನು ಕೊಡಲೇ ಕಾರ್ಯರೂಪಕ್ಕೆ ತರುತ್ತೇವೆ ಎಂದರು.