ಕಡಬ: ಕಡಬದ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಳಕ್ಕ ಎಂಬಲ್ಲಿ ಮನಕಲುಕುವ ಘಟನೆಯೊಂದು ನಡೆದಿದೆ. ರಸ್ತೆ ಹದಗೆಟ್ಟ ಹಿನ್ನೆಲೆ ಅನಾರೋಗ್ಯ ಪೀಡಿತ ಮಹಿಳೆಯನ್ನು ಮರದ ಕೋಲಿಗೆ ಬಟ್ಟೆಯಿಂದ ಕಟ್ಟಿಕೊಂಡು ಆಸ್ಪತ್ರೆಗೆ ಹೊತ್ತು ಸಾಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅನಾರೋಗ್ಯ ಪೀಡಿತ ವೃದ್ಧೆ ಹೊತ್ತು ಸಾಗಿದ ಗ್ರಾಮಸ್ಥರು: ಅನಾರೋಗ್ಯ ಪೀಡಿತ 70 ವರ್ಷದ ಕಮಲ ಎಂಬ ವೃದ್ಧೆಯನ್ನು ಮರದ ಕೋಲೊಂದಕ್ಕೆ ಬಟ್ಟೆಯಿಂದ ಕಟ್ಟಿಕೊಂಡು ಇಬ್ಬರು ಅರ್ಧ ಕಿ.ಮೀ ಹೊತ್ತು ಆಸ್ಪತ್ರೆಗೆ ಕರೆಕೊಂಡು ಹೋಗುವ ದೃಶ್ಯ ಮನ ಕಲಕುವಂತಿದೆ. ಕೆಸರಿನಿಂದ ಕೂಡಿದ ಮಣ್ಣಿನ ರಸ್ತೆಯಲ್ಲೇ ವೃದ್ಧೆಯನ್ನು ಹೊತ್ತು ಸಾಗಿದ್ದಾರೆ. ಮಾತ್ರವಲ್ಲದೇ, ಈ ರಸ್ತೆಯಲ್ಲಿ ಕಾಡಾನೆ ಹಾವಳಿ ಸಹ ಇದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ರಸ್ತೆ ಸಮಸ್ಯೆ.. 3 ಕಿ ಮೀ ಡೋಲಿಯಲ್ಲಿ ಗರ್ಭಿಣಿಯ ಹೊತ್ತುಕೊಂಡು ಬಂದ ಗ್ರಾಮಸ್ಥರು
ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕಚ್ಚಾ ರಸ್ತೆಗಳು ಹದಗೆಟ್ಟು ವರ್ಷಗಳೇ ಕಳೆದಿವೆ. ಇಲ್ಲಿ ಹೆಸರಿಗೆ ಮಾತ್ರ ರಸ್ತೆ ರಿಪೇರಿ ಮಾಡಿಸಿ, ಬಿಲ್ ಪಾಸ್ ಮಾಡಲಾಗುತ್ತಿದೆ ಎನ್ನುವ ಆರೋಪ ಹಿಂದಿನಿಂದಲೂ ಕೇಳಿ ಬರುತ್ತಿದೆ.