ಮಂಗಳೂರು : ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಅವರು ಹಾಡಿರುವ 'ಏ ಮೇರೆ ವತನ್ ಕೇ ಲೋಗೋ' ಎಂಬ ಹಾಡನ್ನು ಯಾರು ಕೇಳಿಲ್ಲ ಹೇಳಿ.. 5 ದಶಕಗಳ ಹಿಂದೆ ನಡೆದ ಚೀನಾ-ಭಾರತದ ಯುದ್ಧ ಸಂದರ್ಭದಲ್ಲಿ ಮಡಿದ ವೀರ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಲು ಈ ಹಾಡನ್ನು ಸಂಯೋಜಿಸಲಾಗಿತ್ತು. ದಶಕಗಳಿಂದಲೂ ಕಾಡುವ ಈ ಹಾಡು ಇಂದಿಗೂ ಪ್ರಸ್ತುತವೆನಿಸಿದೆ.
ಜಗತ್ತನ್ನೇ ಕಾಡುತ್ತಿರುವ ಕೋವಿಡ್ ಸೋಂಕಿನ ವಿರುದ್ಧ ಹೋರಾಡಲು ಇಡೀ ವೈದ್ಯ ಸಮೂಹವೇ ಸನ್ನದ್ಧವಾಗಿದೆ. ದಿನ ದಿನವೂ ಸೋಂಕಿನ ಪ್ರಕರಣ ಅಧಿಕವಾಗುತ್ತಿವೆ. ಸೋಂಕಿನ ವಿರುದ್ಧ ಹೋರಾಟ ಮಾಡುತ್ತಲೇ ತಮಗೂ ಸೋಂಕು ತಗುಲಿಸಿಕೊಂಡು ಮೃತಪಟ್ಟ ವೈದ್ಯರುಗಳು ಇದ್ದಾರೆ. ಇಂತಹ ವೈದ್ಯರ ಸೇವೆಯನ್ನು ಶ್ಲಾಘಿಸಿ ವಿವಿಧ ವಿಡಿಯೋ ತುಣುಕು, ಫೋಟೋಗಳನ್ನು 'ಏ ಮೇರೆ ವತನ್ ಕೇ ಲೋಗೋ' ಹಾಡಿನ ಹಿನ್ನೆಲೆಯಲ್ಲಿ, ಇಎನ್ಟಿ ವೈದ್ಯ ಡಾ. ಗೌತಮ್ ಕುಳಮರ್ವ ಸಂಕಲನ ಮಾಡಿ ಜುಲೈ 1ರ ವೈದ್ಯರ ದಿನದಂದು ಬಿಡುಗಡೆ ಮಾಡಿದ್ದಾರೆ.
ಈ ವಿಡಿಯೋ ವೈದ್ಯರ ಸಮೂಹಗಳಲ್ಲೇ ಸಾಕಷ್ಟು ವೈರಲ್ ಆಗಿ ಯಾರದೋ ಮೂಲಕ ಸ್ವತಃ ಲತಾ ಮಂಗೇಶ್ಕರ್ ಅವರಿಗೆ ತಲುಪಿದೆ. ಈ ವಿಡಿಯೋ ಸಂಕಲನವನ್ನು ಕಂಡ ಅವರು ಹರ್ಷಗೊಂಡು ಜುಲೈ 2ರ ರಾತ್ರಿ ಡಾ. ಗೌತಮ್ ಕುಳಮರ್ವ ಅವರಿಗೆ ಫೋನ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಾವು ಹಾಡಿರುವ ಹಾಡನ್ನು ಹಿನ್ನೆಲೆ ಸಂಗೀತವಾಗಿ ಬಳಸಿ ಸಂಕಲನ ಮಾಡಿರುವುದಕ್ಕೂ ಸಂತಸ ವ್ಯಕ್ತಪಡಿಸಿದ ಅವರು, ತಮ್ಮ ಪ್ರಾಣ ಪಣಕ್ಕಿಟ್ಟು ಕೋವಿಡ್ ಸೋಂಕಿನ ವಿರುದ್ಧ ಹೋರಾಟ ಮಾಡುವ ವೈದ್ಯರ ಬಗ್ಗೆಯೂ ಧನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಡಾ.ಗೌತಮ್ ಕುಳಮರ್ವ ಅವರು ನೆನಪಿಸುತ್ತಾರೆ.
'ಏ ಮೇರೆ ವತನ್ ಕೇ ಲೋಗೋ' ಹಾಡು ಸಂಯೋಜನೆಗೊಂಡಿರೋದು 1962ರಲ್ಲಿ ಅಂದರೆ 58 ವರ್ಷಗಳ ಹಿಂದೆ. ಅಂದು ಚೀನಾ-ಭಾರತದ ನಡುವೆ ಯುದ್ಧ ನಡೆದಿತ್ತು. ಯುದ್ಧದಲ್ಲಿ ಮಡಿದ ಯೋಧರಿಗೆ ಶ್ರದ್ಧಾಂಜಲಿ ಸಮರ್ಪಣೆ ಮಾಡಲು ಈ ಹಾಡನ್ನು ಖ್ಯಾತ ಸಾಹಿತಿ ಪ್ರದೀಪ್ ಕುಮಾರ್ ಬರೆದು, ಸಿ.ರಾಮಚಂದ್ರ ಸಂಗೀತ ಸಂಯೋಜನೆ ಮಾಡಿದ್ದರು. ಗಾಯನ ಲೋಕದ ಅನಭಿಷಿಕ್ತ ರಾಣಿ ಲತಾ ಮಂಗೇಶ್ಕರ್ ಅವರು ಹಾಡನ್ನು ಸುಮಧುರವಾಗಿ ಹಾಡಿದ್ದರು. ಅಂದಿನಿಂದ ಇಂದಿನವರೆಗೂ ಈ ಹಾಡು ಜನರ ಮನಪಟಲದಿಂದ ಮರೆಯಾಗಿಲ್ಲ. ಎಲ್ಲಿ ಈ ಹಾಡನ್ನು ಆಲಿಸಿದರು ಕಿವಿ ನಿಮಿರುವಂತಹ, ದೇಹದ ನರನಾಡಿಗಳಲ್ಲಿ ರಕ್ತ ಸಂಚಾರವೇ ಮುನ್ನುಗ್ಗಿ ಅವ್ಯಕ್ತ ಅನುಭವ ಉಂಟು ಮಾಡುತ್ತದೆ.
ಅದೇ ಹಾಡನ್ನು ಡಾ. ಗೌತಮ್ ಕುಳಮರ್ವ ಅವರು ಪ್ರಸ್ತುತ ಸಮಸ್ಯೆ ಹಾಗೂ ಸನ್ನಿವೇಶಕ್ಕೂ ಸಂವಾದಿಯಾಗುವಂತೆ ಸಂಕಲಿಸಿದ್ದಾರೆ. ಅಂದು ಚೀನಾ ಭಾರತದ ಯುದ್ಧದಲ್ಲಿ ಮಡಿದ ಯೋಧರಿಗೆ ಶ್ರದ್ಧಾಂಜಲಿ ಸಮರ್ಪಿಸಲು 'ಏ ಮೇರೆ ವತನ್ ಕೇ ಲೋಗೊ' ಹಾಡನ್ನು ಸಂಯೋಜಿಸಲಾಗಿದ್ರೆ, ಇಂದು ಚೀನಾದಿಂದ ಬಂದ ಕೋವಿಡ್ ಸೋಂಕಿನ ವಿರುದ್ಧ ಹೋರಾಟ ಮಾಡುವ ವೈದ್ಯರು, ದಾದಿಯರು, ಆಶಾಕಾರ್ಯಕರ್ತೆಯರ ಕಾರ್ಯ ಶ್ಲಾಘಿಸಿ ವಿಡಿಯೋ ಸಂಕಲನ ಮಾಡಲಾಗಿದೆ.
ಈ ವಿಡಿಯೋದಲ್ಲಿ ಕೋವಿಡ್ ಸೋಂಕಿನ ವಿರುದ್ಧ ಹೋರಾಟ ಮಾಡುತ್ತಲೇ ಪ್ರಾಣ ತೆತ್ತ ವೈದ್ಯರುಗಳಾದ ಡಾ. ಜಿತೇಂದ್ರನಾಥ್ ಪಾಂಡೆ, ಪ್ರಶಾಂತ್ ನಡ್ಕರ್, ಡಾ. ಸಾಗರ್ ಪಂಡ್ ಗಲೆ, ಡಾ. ಪೂರ್ಣಿಮಾ ನಾಯರ್, ಬಿಂದು ಕಮಲಾಸನ್ ಅವರ ಫೋಟೋಗಳನ್ನು ಬಳಸಲಾಗಿದೆ. ಅದೇ ರೀತಿ ವೈದ್ಯರ ಮೇಲಿನ ದಾಳಿ, ಕೋವಿಡ್ ಸೋಂಕಿನ ವಿರುದ್ಧ ಹೋರಾಟ ಮಾಡುವ ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆಯರು, ಮೃತದೇಹಗಳ ವಿಲೇವಾರಿ ಮಾಡುವ ಆರೋಗ್ಯ ಕಾರ್ಯಕರ್ತರು, ಹೀಗೆ ಸೋಂಕಿನ ವಿರುದ್ಧ ಹೋರಾಟದ ಎಲ್ಲಾ ಚಿತ್ರಿಕೆಗಳನ್ನು ಬಳಸಲಾಗಿದೆ. ಅಲ್ಲದೆ ಇತ್ತೀಚೆಗೆ ಲಡಾಖ್ ಗಡಿಯಲ್ಲಿ ಚೀನಿ ಸೈನಿಕರ ವಿರುದ್ಧ ಹೋರಾಟ ಮಾಡಿ ಮಡಿದ ಯೋಧರ ತುಣುಕುಗಳನ್ನು ಸೇರಿಸಲಾಗಿದೆ.
ಡಾ. ಗೌತಮ್ ಕುಳಮರ್ವ ಅವರು ಈ ಬಗ್ಗೆ 'ಈಟಿವಿ ಭಾರತ'ದೊಂದಿಗೆ ಮಾತನಾಡಿ, ಕೋವಿಡ್ ಸೋಂಕಿನ ವಿರುದ್ಧ ಹೋರಾಡಿ ಮೃತಪಟ್ಟ ವೈದ್ಯ ಸಮೂಹಕ್ಕೆ ಭಾಷ್ಪಾಂಜಲಿ ಸಲ್ಲಿಸಲು ನನ್ನ ಗೆಳೆಯನ ಸಹಾಯದಿಂದ ಈ ವಿಡಿಯೋ ಸಂಕಲನವನ್ನು ಮಾಡಿದ್ದೇನೆ. ಜುಲೈ 1ರ ವೈದ್ಯರ ದಿನದಂದು ಈ ವಿಡಿಯೋ ಬಿಡುಗಡೆ ಮಾಡಿದ್ದು, ಮರುದಿನವೇ ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸ್ವತಃ ಲತಾ ಮಂಗೇಶ್ಕರ್ ಅವರೇ ಕರೆ ಮಾಡಿದ್ದು, ತುಂಬಾ ಸಂತೋಷ ತಂದಿದೆ. ಇದು ಪ್ರಚಾರಕ್ಕೆ ಮಾಡಿದ್ದಲ್ಲ, ಕೋವಿಡ್ ಸೋಂಕಿನ ಈ ಪ್ರಸ್ತುತ ಸನ್ನಿವೇಶದಲ್ಲಿ ಹೋರಾಟ ಮಾಡುವ ಎಲ್ಲರಿಗೂ ಇದು ಸಮರ್ಪಣೆ ಎಂದರು.