ಮಂಗಳೂರು: ಲಾಕ್ಡೌನ್ ಸದುಪಯೋಗಪಡಿಸಿಕೊಂಡ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪ ಕೊಳ್ನಾಡು ಗ್ರಾಮದ ಸುರಿಬೈಲು ಸರ್ಕಾರಿ ಶಾಲೆಯಲ್ಲಿ ಶಾಲಾ ಸಿಬ್ಬಂದಿ ತರಕಾರಿ ತೋಟ ಮಾಡಿ ಗಮನ ಸೆಳೆದಿದ್ದಾರೆ.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಎಂ. ಅಬೂಬಕ್ಕರ್ ಹಾಗೂ ಶಾಲಾ ಮುಖ್ಯ ಶಿಕ್ಷಕ ಗೋಪಾಲ ಎಸ್. ನೇತೃತ್ವದಲ್ಲಿ ಸಮಿತಿ ಸದಸ್ಯರು, ಅಧ್ಯಾಪಕರು, ಸ್ಥಳೀಯರ ಸಹಕಾರ ಇದಕ್ಕಿದೆ. ಜೂನ್ ತಿಂಗಳಿನಲ್ಲಿ ವಿವಿಧ ಬಗೆಯ ತರಕಾರಿ ಬೀಜಗಳನ್ನು ಬಿತ್ತಿ 25ಕ್ಕೂ ಅಧಿಕ ತರಕಾರಿಗಳನ್ನು ಬೆಳೆಸಲಾಗುತ್ತಿದೆ. ತೋಟದಲ್ಲಿ ಲಸಂಡೆ, ಕೆಂಪು ಬೆಂಡೆ, ಬಿಳಿಬೆಂಡೆ, ಸೋರೆಕಾಯಿ, ಪಡುವಲಕಾಯಿ, ಕುಂಬಳಕಾಯಿ, ಚೀನಿಕಾಯಿ, ಹರಿವೆ, ಮರಗೆಣಸು, ಸಿಹಿಗೆಣಸು, ಸೌತೆಕಾಯಿ, ಮುಳ್ಳುಸೌತೆ, ಹಾಗಲಕಾಯಿ, ಶುಂಠಿ, ಅರಸಿನ, ಬಾಳೆ, ಅನನಾಸ್, ಟೊಮೊಟೊ ಬೆಳೆ ಸಮೃದ್ಧವಾಗಿ ಬೆಳೆದಿದೆ.
ಶಾಲೆಯ 1.5 ಎಕ್ರೆ ಜಾಗದಲ್ಲಿ ಅಡಕೆ ತೋಟ ನಿರ್ಮಿಸಲಾಗಿದ್ದು,ತರಕಾರಿ, ಅನನಾಸ್, ಅಡಿಕೆ ತೋಟ, ಬಾಳೆಗಿಡ ಹೀಗೆ ಪ್ರತ್ಯೇಕ ಜಾಗದಲ್ಲಿ ಬೆಳಸಲಾಗುತ್ತಿದೆ. ಇದರಿಂದ ಶಾಲೆಗೆ 1.80 ಲಕ್ಷ ರೂಪಾಯಿ ಆದಾಯ ಬರುತ್ತಿದೆ. ಶಾಲೆ ರಜೆ ಇರುವುದರಿಂದ ಬೆಳೆದ ತರಕಾರಿಗಳನ್ನು ಅಂಗಡಿಗಳಲ್ಲಿ ಡಿಪಾಸಿಟ್ ಇಡಲಾಗುತ್ತಿದೆ. ಶಾಲೆ ಪ್ರಾರಂಭವಾದ ಬಳಿಕ ಮತ್ತೆ ಖರೀದಿಸಿ ಬಿಸಿಯೂಟಕ್ಕೆ ಬಳಕೆ ಮಾಡಲಾಗುತ್ತದ ಎಂದು ಶಾಲೆಯ ಮೂಖ್ಯಸ್ಥರು ತಿಳಿಸಿದ್ದಾರೆ.