ಮಂಗಳೂರು: ಗೋಲಿಬಾರ್ನಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡುತ್ತೇನೆ ಎಂದು ಹೇಳಿ ಈಗ ನಿರಾಕರಿಸುತ್ತಿರುವ ಯಡಿಯೂರಪ್ಪ ಅವರು ಆರ್ಎಸ್ಎಸ್ನ ಮುಖ್ಯಮಂತ್ರಿಯೇ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಪ್ರಶ್ನಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಲಿಬಾರ್ನಲ್ಲಿ ಸಾವನ್ನಪ್ಪಿದ ಬಳಿಕ ಸಾವನ್ನಪ್ಪಿದವರನ್ನು ಆಪಾದಿತರನ್ನಾಗಿ ಮಾಡಲಾಗಿದೆ. ಸತ್ತವರ ಮೇಲೆ ಜಾರ್ಜ್ಶೀಟ್ ಮಾಡಿರುವುದು ಭಾರತೀಯ ದಂಡ ಸಂಹಿತೆಯ ಉಲ್ಲಂಘನೆಯಾಗಿದೆ. ಸತ್ತವರ ಮೇಲೆ ಆಪಾದನೆ ಮಾಡುವುದು ನಾನು ದೇಶದಲ್ಲಿ ಕೇಳಿಲ್ಲ ಎಂದರು. ಘಟನೆ ಬಳಿಕ ಪರಿಹಾರ ಕೊಡುತ್ತೇನೆ ಎಂದವರು ಈಗ ಕೊಡುವುದಿಲ್ಲ ಎಂದು ಹೇಳುತ್ತಿರುವುದು ಅಧಿಕಾರದ ದುರ್ಬಳಕೆಯಾಗಿದೆ. ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊರಬೇಕು. ಪರಿಹಾರ ಕೊಡುವುದಿಲ್ಲ ಎಂಬ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು. ಅವರು ಒತ್ತಡದಿಂದ ಹೇಳಿಕೆ ಕೊಟ್ಟಿದ್ದು, ಅವರ ಮಾತಿಗೆ ಬೆಲೆ ಇಲ್ಲದಂತಾಗಿದೆ. ಅವರು ಮುಖ್ಯಮಂತ್ರಿ ಆಗಿರಲು ಸಮರ್ಥರಲ್ಲ ಎಂದರು.
ಘಟನೆ ಬಗ್ಗೆ ಕಾಂಗ್ರೆಸ್ ಮೇಲೆ ಆರೋಪ ಮಾಡಲಾಗುತ್ತಿದೆ. ಇದರ ಸತ್ಯಾಂಶ ಹೊರಬರಲು, ಘಟನೆಗೆ ಕಾರಣರ್ಯಾರು ಎಂದು ತಿಳಿಯಲು ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಮಂಗಳೂರಿನಲ್ಲಿ ಪ್ರತಿಭಟನೆಗೆ ಅನುಮತಿ ನೀಡಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಪ್ರತಿಭಟನೆ ವೇಳೆ ಎಚ್ಚರಿಕೆ ನೀಡದೆ ಗಾಳಿಯಲ್ಲಿ ಗುಂಡು ಹಾರಿಸದೆ ಗೋಲಿಬಾರ್ ಮಾಡಲಾಗಿದೆ. ಗೋಲಿಬಾರ್ ನಡೆಸಲು ಸುಪ್ರೀಂ ಕೋರ್ಟ್, ಹೈಕೋರ್ಟ್ ನೀಡಿರುವ ಸೂಚನೆಗಳನ್ನು ಪಾಲಿಸದೆ ಪ್ರೊಟೋಕಾಲ್ ಉಲ್ಲಂಘಿನೆ ಮಾಡಲಾಗಿದೆ. ಇವರ ಗೋಲಿಬಾರ್ಗೆ 4 ರಿಂದ 5 ಸಾವು ಆಗಬಹುದಿತ್ತು. ದೇವರ ದಯೆಯಿಂದ ಆಗಿಲ್ಲ ಎಂದರು.
ಯು.ಟಿ.ಖಾದರ್ ನೀಡಿದ ಹೇಳಿಕೆ ನೋಡಿದ್ದೇನೆ. ಅವರು ಬೆಂಕಿ ಹಚ್ಚುತ್ತೇನೆ ಎಂದು ಹೇಳಿಲ್ಲ. ಯು.ಟಿ.ಖಾದರ್ ಅವರಿಗೆ ಕೋಮುವಾದದ ಹಿನ್ನೆಲೆ ಇಲ್ಲ. ಅವರು ಜಾತ್ಯತೀತ ವ್ಯಕ್ತಿ ಎಂದು ಹೇಳಿದ ಅವರು, ಕೋಮುವಾದದ ಹೇಳಿಕೆ ನೀಡುತ್ತಿರುವ ಸಿ.ಟಿ.ರವಿ, ಪ್ರಹ್ಲಾದ್ ಜೋಷಿ, ಸುರೇಶ್ ಅಂಗಡಿ, ನಳಿನ್ ಕುಮಾರ್ ಕಟೀಲ್ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದರು.