ಬಂಟ್ವಾಳ (ದಕ್ಷಿಣ ಕನ್ನಡ): ಸರ್ಕಾರ ರಚನೆಯಾದ ತಕ್ಷಣ ಗ್ಯಾರಂಟಿ ಯೋಜನೆಗಳನ್ನು ನಿಯಮಾನುಸಾರವಾಗಿ ಅನುಷ್ಠಾನ ಮಾಡುತ್ತೇವೆ. ಯಾರು ಅರ್ಹರಿದ್ದಾರೋ ಅವರಿಗೆ ಗ್ಯಾರಂಟಿ ವಿತರಣೆ ಗ್ಯಾರಂಟಿ ಎಂದು ಯುಟಿ ಖಾದರ್ ಹೇಳಿದ್ದಾರೆ.
ಬಂಟ್ವಾಳದಲ್ಲಿ ಬುಧವಾರ ಸಂಜೆ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಕೇಂದ್ರ ಮಾಜಿ ಸಚಿವ ಬಿ ಜನಾರ್ದನ ಪೂಜಾರಿ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಖಾದರ್, ಮುಂದಿನ ದಿನಗಳಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಜಾರಿ ಮಾಡುತ್ತೇವೆ. ಅತ್ಯುತ್ತಮವಾದ ಕೆಲಸ ಮಾಡಿಕೊಂಡು ಬಿಜೆಪಿ ಸರ್ಕಾರ ಮತ್ತು ಕಾಂಗ್ರೆಸ್ಗಿರುವ ವ್ಯತ್ಯಾಸವನ್ನು ನಾವು ಕೆಲಸದ ಮುಖಾಂತರ ನಾವು ತೋರಿಸಿಕೊಡುತ್ತೇವೆ ಎಂದು ಹೇಳಿದರು.
ಅಂಬೇಡ್ಕರ್ ಅವರ ಸಂವಿಧಾನದ ಪರ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಹಿಂದೆ ಆರೋಗ್ಯ ಸಚಿವನಾಗಿ, ನಗರಾಭಿವೃದ್ಧಿ ಸಚಿವ, ವಸತಿ ಸಚಿವನಾಗಿ ಪಕ್ಷ ಕೊಟ್ಟಿರುವ ಜವಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿ ಪಕ್ಷಕ್ಕೆ ಗೌರವ ತರುವಂತಹ ಕೆಲಸವನ್ನು ಮಾಡಿದ್ದೇನೆ. ಪಕ್ಷ ಯಾವ ಜವಾಬ್ದಾರಿ ಕೊಡುತ್ತದೆಯೋ ಅದಕ್ಕೆ ನಾನು ಬದ್ಧ. ಇಂಥದ್ದೇ ಆಗಬೇಕು ಎಂದೇನಿಲ್ಲ ಎಂದು ಹೇಳಿದರು.
ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅವರನ್ನು ನಾಮಪತ್ರ ಸಲ್ಲಿಕೆ ಸಂದರ್ಭವೂ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೆ. ಅವರು ನನ್ನ ಅತ್ಯಂತ ಪ್ರೀತಿಯ ನಾಯಕರು. ನಾನು ಎನ್ಎಸ್ಯುಐ ಅಧ್ಯಕ್ಷನಾಗಲು ಅವರ ಮಾರ್ಗದರ್ಶನವೇ ಕಾರಣ. ಅವರ ಪ್ರಾಮಾಣಿಕತೆ, ಪರಿಶ್ರಮ, ಸಾಮಾಜಿಕ ಬದ್ಧತೆ ನನ್ನ ರಾಜಕೀಯ ಜೀವನದಲ್ಲೂ ಪರಿಣಾಮ ಬೀರಿದೆ. ಗೆಲುವು ಸಾಧಿಸಿದ ಬಳಿಕ ಅವರ ಆಶೀರ್ವಾದ ಪಡೆದುಕೊಂಡಿದ್ದೇನೆ. ಎಲ್ಲ ಕಾಂಗ್ರೆಸಿಗರನ್ನೂ ಕುಟುಂಬದ ರೀತಿಯಲ್ಲಿ ಕೊಂಡೊಯ್ಯಬೇಕು ಎಂಬ ಅವರ ಸಲಹೆ ಸ್ವೀಕರಿಸಿದ್ದೇನೆ ಎಂದರು.
ಈ ಸಂದರ್ಭ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಪ್ರಮುಖರಾದ ಸಂತೋಷ್ ಶೆಟ್ಟಿ, ಈಶ್ವರ ಉಳ್ಳಾಲ್, ಹಾಸಿರ್ ಪೇರಿಮಾರ್, ಹುಸೈನ್ ಕುಂಞಮೋನ್, ಮಲ್ಲಿಕಾ ಪಕ್ಕಳ, ಅರುಣ್ ಡಿಸೋಜಾ, ದೇವದಾಸ್ ಭಂಡಾರಿ, ದೀಪಕ್ ಪಿಲಾರ್, ಸುರೇಶ್ ಭಟ್ನಾಗರ್, ಮುಸ್ಪಾಫ ಹರೇಕಳ, ಮರಳೀಧರ ಶೆಟ್ಟಿ, ಫಾರೂಕ್ ದೇರಳಕಟ್ಟೆ, ನವಾಝ್ ನರಿಂಗಾಣ್, ಶಮೀರ್ ಫಜೀರ್, ದಿನೇಶ್ ಪೂಜಾರಿ, ರಝಾಕ್ ಕುಕ್ಕಾಜೆ, ಮಹನ್ಮದ್ ಮುಕ್ಕಚ್ಚೇರಿ ಮತ್ತಿತರರು ಉಪಸ್ಥಿತರಿದ್ದರು.
ಇತ್ತೀಚಿಗೆ ಜಿ ಪರಮೇಶ್ವರ್ ಅವರು ಕಾಂಗ್ರೆಸ್ ಘೋಷಣೆ ಮಾಡಿರುವ ಗ್ಯಾರಂಟಿಗಳಿಗೆ ಕಂಡಿಷನ್ಸ್ ಇರುತ್ತದೆ ಎಂದು ಹೇಳಿದ್ದರು. ಮೊದಲ ಕ್ಯಾಬಿನೆಟ್ನಲ್ಲಿ 5 ಗ್ಯಾರಂಟಿ ಈಡೇರಿಸುವ ಭರವಸೆ ಕೊಟ್ಟಿದ್ದೇವೆ. ಅದಕ್ಕೆ ನಾವು ಬದ್ದರಾಗಿರುತ್ತೇವೆ. ಮೊದಲ ಕ್ಯಾಬಿನೆಟ್ ನಲ್ಲಿ ಇವುಗಳನ್ನು ಜಾರಿ ಮಾಡ್ತೀವಿ. ಗ್ಯಾರಂಟಿಗಳ ಮೇಲೆ ಪ್ರಾಕ್ಟಿಕಲ್ ಆಗಿ ವರ್ಕ್ ಮಾಡಿ ಜಾರಿ ಮಾಡ್ತೀವಿ. ಗ್ಯಾರಂಟಿಗಳಿಗೆ ಮಾನದಂಡ ಇರುತ್ತದೆ. ಹಾಗೇ ಕೊಟ್ಟರೆ ಎಲ್ಲರೂ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದರು.
ಇದನ್ನೂ ಓದಿ: ಇನ್ನೂ ಬಿಚ್ಚಿಕೊಳ್ಳದ ಕಾಂಗ್ರೆಸ್ ಸಿಎಂ ಆಯ್ಕೆ ಕಗ್ಗಂಟು: ದೆಹಲಿಯಲ್ಲಿ ಮುಂದುವರಿದ ಕಸರತ್ತು