ಮಂಗಳೂರು: ಕೇಂದ್ರ ಸರಕಾರ ಮಂಡಿಸಿರುವ 2020-21 ರ ಬಜೆಟ್ನಲ್ಲಿ ಭಾರತ ಪ್ರಕಾಶಿಸುವ ಯಾವುದೇ ಪ್ರಯತ್ನ ಆಗಿಲ್ಲ ಎಂದು ಮಾಜಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ವರ್ಷದ ಬಜೆಟ್ ಬಗ್ಗೆ ದೇಶದ ಬಹುಪಾಲು ಜನರಿಗೆ ಅಪೇಕ್ಷೆಯಿತ್ತು. ಆದರೆ ಎಡಿಬಿಐ, ಎಲ್ಐಸಿ ಷೇರ್ಗಳನ್ನು ಬಿಜೆಪಿ ಸರಕಾರ ಖಾಸಗಿಯವರಿಗೆ ಮಾರಲು ಹೊರಟಿದೆ. ಇದಕ್ಕಿಂತ ದುಸ್ಥಿತಿ ಮತ್ತೊಂದಿಲ್ಲ. ಇದು ಮನೆಯಲ್ಲಿ ಕಷ್ಟ ಬಂದಾಗ ಮಾಂಗಲ್ಯ ಅಡವಿಟ್ಟಂತೆ. ಇದು ದೇಶ ಕಷ್ಟದ ಪರಿಸ್ಥಿತಿಯಲ್ಲಿದೆ ಎಂದು ತೋರಿಸಿಕೊಟ್ಟಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.
7-8 ರಲ್ಲಿದ್ದ ಜಿಡಿಪಿ 3.5 ಕ್ಕೆ ಕುಸಿದಿದೆ. ಆಟೋಮೊಬೈಲ್ ಸೆಕ್ಟರ್ ನಶಿಸಿ ಹೋಗುತ್ತಿದೆ. ಎಲ್ಲರಿಗೂ ಆರ್ಥಿಕ ಸಂಕಷ್ಟ ತಲೆದೋರಿರುವ ಹಿನ್ನೆಲೆಯಲ್ಲಿ ಇದನ್ನು ಸರಿಪಡಿಸುವ ಪ್ರಯತ್ನ ಈ ಬಜೆಟ್ ಮೂಲಕ ಮಾಡಬಹುದು ಎಂದು ಜನರು ನಿರೀಕ್ಷೆ ಮಾಡಿದ್ದರು. ಆದರೆ ಕೇಂದ್ರ ಸರಕಾರದ ಬಜೆಟ್ ನೋಡಿ ದೇಶದ ಎಲ್ಲಾ ಜನರಿಗೂ ನಿರಾಶೆ ಉಂಟಾಗಿದೆ ಎಂದು ಅವರು ಹೇಳಿದರು.
ರೈತರ ಆರ್ಥಿಕ ಪರಿಸ್ಥಿತಿಯನ್ನು ದ್ವಿಗುಣಗೊಳಿಸುತ್ತೇವೆ ಎಂದು ಹೇಳಲಾಗುತ್ತಿದೆ.. ಆದರೆ ದ್ವಿಗುಣಗೊಳಿಸಲು ಕೈಗೊಂಡ ಕ್ರಮ ಯಾವುದು ಎಂದು ಹೇಳುವುದಿಲ್ಲ. ಬರೀ ಬಾಯಿ ಮಾತಿಗೆ ಮಾತ್ರ ಹೇಳಲಾಗುತ್ತಿದೆ. ಫಸಲ್ ಭೀಮಾ ಯೋಜನೆಯ ಅನುದಾನ ಕಡಿತಗೊಳಿಸಲಾಗಿದೆ. ಎನ್ಆರ್ ಜಿ ಅನುದಾನವವನ್ನೂ ಕಡಿತಗೊಳಿಸಲಾಗಿದೆ. ರೈತರ ಉತ್ಪಾದನೆಗಳಿಗೆ ಮೌಲ್ಯಾಧಾರಿತ ಬೆಲೆಯನ್ನು ಇವರು ನಿಗದಿಪಡಿಸಿಲ್ಲ. ಆದ್ದರಿಂದ ಇದು ಶಿಸ್ತು ಇಲ್ಲದ ಬಜೆಟ್ ಆಗಿದೆ ಎಂದು ಯು.ಟಿ.ಖಾದರ್ ಕಿಡಿಕಾರಿದರು.
ಸುಮಾರು 56 ಲಕ್ಷ ಕೋಟಿ ರೂ. ನಮ್ಮ ದೇಶದ ಮೇಲೆ ಇದ್ದ ಸಾಲ ಇಂದು 96 ಲಕ್ಷ ಕೋಟಿ ರೂ. ಸಾಲ ಆಗಿದೆ. ಮತ್ತೆ ಆರು ಲಕ್ಷ ಕೋಟಿ ರೂ. ಡೆಪಾಸಿಟ್ ಅಂಥ ಹೇಳಲಾಗಿದೆ. ಆದ್ದರಿಂದ ಸಾಲ ಮತ್ತೆ 97 ಲಕ್ಷ ಕೋಟಿ ರೂ.ಗೇರಿದೆ. ಆದ್ದರಿಂದ 2014 ರಿಂದ 2019 ಕ್ಕೆ ಬರುವಾಗ ದೇಶದ ಪ್ರತಿಯೊಬ್ಬರ ಮೇಲೆ 27 ಸಾವಿರ ರೂ. ಸಾಲದ ಹೊರೆ ಬಿದ್ದಿದೆ. ಈ ಬಜೆಟ್ ನಲ್ಲಿ ಕರ್ನಾಟಕಕ್ಕೆ ಅರ್ಬನ್ ರೈಲ್ವೆ ಅನುದಾನದ ಹೊರತು ಬೇರೇನು ದೊರಕಿಲ್ಲ. ದ.ಕ.ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರೂ ನಮ್ಮ ಜಿಲ್ಲೆಗೆ ಯಾವುದೇ ದೊಡ್ಡ ಮಟ್ಟದ ಅನುದಾನ ಬಂದಿಲ್ಲ. ಇದ್ದ ಎನ್ಎಂಪಿಟಿ, ವಿಮಾನ ನಿಲ್ದಾಣಗಳನ್ನು ಕಳೆದುಕೊಂಡೆವು. ಆದ್ದರಿಂದ ಈ ಬಜೆಟ್ ನಿಂದ ಜನಸಾಮಾನ್ಯರಿಗೆ ಯಾವುದೇ ಪ್ರಯೋಜನವಿಲ್ಲ. ದೇಶದ ನಿರುದ್ಯೋಗ ಸಮಸ್ಯೆ ಬಗೆಹರಿಸಲು ಯಾವುದೇ ಯೋಜನೆಗಳನ್ನು ಅನುಮೋದಿಸಿಲ್ಲ. ದೇಶದ ಭವಿಷ್ಯಕ್ಕೆ ಪೂರಕವಾಗುವ ಯಾವುದೇ ಯೋಜನೆ ಈ ಬಜೆಟ್ನಲ್ಲಿಲ್ಲ. ಆದ್ದರಿಂದ ನಮ್ಮ ಹಣಕಾಸು ಸಚಿವೆ ಸಂಪೂರ್ಣ ವಿಫಲವಾಗಿದ್ದಾರೆ ಎಂದು ಯು.ಟಿ.ಖಾದರ್ ಹೇಳಿದರು.