ಬಂಟ್ವಾಳ: ತಾಲೂಕಿನ ಯುವಕರ ತಂಡವೊಂದು ವೃದ್ಧೆಯೊಬ್ಬರ ಶಿಥಿಲಗೊಂಡಿದ್ದ ಮನೆಯನ್ನು ರಿಪೇರಿ ಮಾಡುವ ಮೂಲಕ ಲಾಕ್ಡೌನ್ ಸಮಯವನ್ನು ಸದುಪಯೋಗ ಮಾಡಿಕೊಂಡಿದೆ.
ತಾಲೂಕಿನ ಬೋಳಂತೂರು ಎಂಬಲ್ಲಿರುವ ಗುಂಡಿಮಜಲು ತುಂಗಾ ಎಂಬುವರ ಮನೆ ಶಿಥಿಲಗೊಂಡಿದ್ದು, ಲಾಕ್ಡೌನ್ ಇದ್ದುದರಿಂದ ಕಾರ್ಮಿಕರು, ಗಾರೆ ಕೆಲಸದವರ ಕೊರತೆಯಿಂದ ಕಂಗಾಲಾಗಿದ್ದರು. ಈ ಸಂದರ್ಭ ನೆರವಿಗೆ ಬಂದ ಸ್ಥಳೀಯ ಶೃಂಗಗಿರಿ ಶ್ರೀ ಶಾರದಾಂಬಾ ಭಜನಾ ಮಂಡಳಿಯ ಸದಸ್ಯರು ಮನೆಯನ್ನು ಶ್ರಮದಾನದ ಮೂಲಕ ದುರಸ್ತಿಗೊಳಿಸಿದ್ದಾರೆ.
ಸುಮಾರು ಒಂದು ತಿಂಗಳು ಲಾಕ್ಡೌನ್ ಇದ್ದ ಕಾರಣ ಈ ಅವಧಿಯಲ್ಲಿ ಸ್ಥಳೀಯರೆಲ್ಲರೂ ಒಟ್ಟಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಮನೆ ರಿಪೇರಿಗೆ ಸಹಕರಿಸಿದ್ದಾರೆ. ಈ ಕಾರ್ಯಕ್ಕೆ ನೋಣಯ್ಯ ಜಿ.ಎನ್. ಮತ್ತು ಚೆನ್ನಪ್ಪ ಪೂಜಾರಿ ಗುಂಡಿಮಜಲು ಮುಂದಾಳತ್ವ ವಹಿಸಿದ್ದರು. ನವೀನ್ ಕುಮಾರ್ ಕೊಕ್ಕಪುಣಿ, ರಮೇಶ್ ಗುಂಡಿಮಜಲು ಹಾಗೂ ಹಲವರು ಸಹಕರಿಸಿದ್ದಾರೆ.