ಪುತ್ತೂರು (ದಕ್ಷಿಣ ಕನ್ನಡ): ಪೊಲೀಸ್ ಇಲಾಖೆಯಲ್ಲಿ ಉತ್ತಮ ಕರ್ತವ್ಯ ನಿರ್ವಹಣೆಯನ್ನು ಗುರುತಿಸಿ ಸರ್ಕಾರ ನೀಡುವ 2020ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಉಪ್ಪಿನಂಗಡಿ ಪೊಲೀಸ್ ಠಾಣಾ ಕಾನ್ಸ್ಟೇಬಲ್ ಪ್ರವೀಣ್ ರೈ ಪಿ.ಎಂ ಆಯ್ಕೆಯಾಗಿದ್ದಾರೆ.
ಪ್ರವೀಣ್ ರೈಯವರು 2008ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದು, ಪ್ರಸ್ತುತ ಉಪ್ಪಿನಂಗಡಿ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಮಂಗಳೂರು ನಗರದ ಪಾಂಡೇಶ್ವರ ಪೊಲೀಸ್ ಠಾಣೆ, ವಿಟ್ಲ ಪೊಲೀಸ್ ಠಾಣೆ, ಜಿಲ್ಲಾ ಅಪರಾಧ ಪತ್ತೆದಳದಲ್ಲಿ ಸೇವೆ ಸಲ್ಲಿಸಿದ್ದು, ಜಿಲ್ಲೆಯಲ್ಲಿ ನಡೆದಿದ್ದ ಅನೇಕ ದರೋಡೆ, ಕೊಲೆ, ಕಳ್ಳತನ, ಜಾತೀಯ ಗಲಭೆಗಳ ಸಂದರ್ಭಗಳಲ್ಲಿ ಆರೋಪಿಗಳ ಪತ್ತೆಯಲ್ಲಿ ತನಿಖಾಧಿಕಾರಿಗಳಿಗೆ ಸಹಕರಿಸಿದ್ದರು.
ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ಅಥವಾ ಘೋರ ಅಪರಾಧ ಪ್ರಕರಣ ದಾಖಲಾದ ಸಂದರ್ಭದಲ್ಲಿ ಜಿಲ್ಲಾ ಅಧೀಕ್ಷಕರ ವಿಶೇಷ ತಂಡದಲ್ಲಿ ಪ್ರವೀಣ್ ರೈ ಕಾರ್ಯ ನಿರ್ವಹಿಸುತ್ತಿದ್ದರು. ಇಂತಹ ಅನೇಕ ಉತ್ತಮ ಕಾರ್ಯಗಳನ್ನು ಗುರುತಿಸಿ ಮುಖ್ಯಮಂತ್ರಿ ಪದಕಕ್ಕೆ ಉನ್ನತ ಅಧಿಕಾರಿಗಳು ಇವರ ಹೆಸರನ್ನು ಶಿಫಾರಸು ಮಾಡಿದ್ದರು. ಪ್ರವೀಣ್ ರೈಯವರಿಗೆ 13 ವರ್ಷಗಳಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಂದ 30 ಪ್ರಶಂಸನಾ ಪತ್ರ, ನಗದು ಬಹುಮಾನ ಹಾಗೂ ಪಶ್ಚಿಮ ವಲಯ ಐಜಿಪಿಯವರಿಂದ 3 ಪ್ರಶಂಸನಾ ಪತ್ರ, ನಗದು ಬಹುಮಾನ, ವಿವಿಧ ಸಂಘ-ಸಂಸ್ಥೆ ಹಾಗೂ ಸಾರ್ವಜನಿಕರಿಂದ 15 ಕ್ಕಿಂತಲೂ ಹೆಚ್ಚು ಕಡೆಗಳಲ್ಲಿ ಸನ್ಮಾನ ಮಾಡಲಾಗಿದೆ.
ಪ್ರವೀಣ್ ರೈ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ನಡುಕೂಟೇಲು ವಿಶ್ವನಾಥ ರೈ ಹಾಗೂ ಲೀಲಾವತಿ ದಂಪತಿಗಳ ಪುತ್ರರಾಗಿದ್ದು, ಪತ್ನಿ ದೀಪಾ ಪಿ.ಎ. ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದಾರೆ.
ಓದಿ: ಗೋವಿಂದಪುರ ಡ್ರಗ್ಸ್ ಕೇಸ್: ಕೆಂಪೇಗೌಡ ಸಿನಿಮಾ ನಿರ್ಮಾಪಕ ಶಂಕರ್ಗೌಡ ಬಂಧನ