ಮಂಗಳೂರು: ಅಮೂಲ್ಯವಾದ ಜ್ಞಾನಕ್ಕೂ, ಮಾಹಿತಿಗೂ ತುಂಬಾ ವ್ಯತ್ಯಾಸವಿದೆ. ಇಂತಹ ವಿಶ್ವವಿದ್ಯಾಲಯಗಳು ಎಲ್ಲಾ ಶ್ರೇಷ್ಠವಾದ ಜ್ಞಾನವನ್ನು ಸಂಗ್ರಹಿಸಿಡುವ ಕೇಂದ್ರ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.
ನಗರದ ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ 150ನೇ ವರ್ಷಾಚರಣೆ ಉದ್ದೇಶಿಸಿ ಮಾತನಾಡಿದ ಅವರು, ಇಲ್ಲಿನ ಅಧ್ಯಾಪಕರ ಬದ್ಧತೆ ದೇಶಕ್ಕೆ ಅನೇಕ ರತ್ನಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಇಂದು ಕೇವಲ ಪದೋನ್ನತಿಗಾಗಿ ಮಾತ್ರ ಪಿಎಚ್.ಡಿ ಹಾಗೂ ಸ್ನಾತಕೋತ್ತರ ಪದವಿಗಳನ್ನು ಮಾಡುವಂತಹ ಪರಿಸ್ಥಿತಿ ಬಂದಿದೆ. ಆದರೆ, ಜ್ಞಾನದ ಉದಯವಾಗಬೇಕಾದಲ್ಲಿ ವಿಸ್ತೃತವಾದ ಜ್ಞಾನ ಭಂಡಾರಗಳ ಉಪಯೋಗ ಪಡೆಯಬೇಕಾಗುತ್ತದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ, ಮಾಜಿ ಸಚಿವ ಯು.ಟಿ.ಖಾದರ್, ಮಂಗಳೂರು ವಿವಿ ಕುಲಪತಿ ಡಾ.ಪಿ.ಎಸ್.ಯಡಪಡಿತ್ತಾಯ, ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಇದ್ದರು.