ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದೆ. ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಏ.20 ಕೊನೆಯ ದಿನಾಂಕವಾಗಿದೆ. ಇನ್ನು ಕೇವಲ ಮೂರು ದಿನ ಮಾತ್ರ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಆದರೆ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾರೆಂಬುದು ಇನ್ನೂ ಅಂತಿಮವಾಗಿಲ್ಲ.
ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇದೆ. ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ಡಾ.ವೈ ಭರತ್ ಶೆಟ್ಟಿ ಅವರಿಗೆ ಟಿಕೆಟ್ ನೀಡಲಾಗಿದೆ. ಭರತ್ ಶೆಟ್ಟಿ ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿ ಸ್ಪರ್ಧಿಸಿ ಜಯಗಳಿಸಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಪಡೆಯಲುಮಾಜಿ ಶಾಸಕ ಮೊಯ್ದಿನ್ ಬಾವ ಮತ್ತು ಇನಾಯತ್ ಅಲಿ ನಡುವೆ ನೇರ ಪೈಪೋಟಿ ಇದೆ. ಇವರು ಇಬ್ಬರು ಹೈಕಮಾಂಡ್ನಲ್ಲಿ ಪ್ರಬಲ ಲಾಬಿ ನಡೆಸುತ್ತಿದ್ದು, ಟಿಕೆಟ್ ಯಾರಿಗೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಮೊಯ್ದಿನ್ ಬಾವ ಅವರು 2013ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿ ಸ್ಪರ್ಧಿಸಿ ಕಾಂಗ್ರೆಸ್ ಪಕ್ಷದಿಂದ ಜಯಗಳಿಸಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ವೈ ಭರತ್ ಶೆಟ್ಟಿ ಅವರ ಎದುರು ಪರಾಭವಗೊಂಡಿದ್ದರು. ಇವರು ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. 2018 ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ಬಳಿಕ ಅವರು ಬಿಜೆಪಿ ಆಡಳಿತದ ವಿರುದ್ಧ ಕ್ಷೇತ್ರದಲ್ಲಿ ವ್ಯಾಪಕ ಪ್ರಚಾರ ನಡೆಸಿದ್ದರು. 2023ರ ಚುನಾವಣೆಯಲ್ಲಿ ಸ್ಪರ್ಧಿಸಲು ಅವರು ಕಳೆದ ಐದು ವರ್ಷಗಳಿಂದ ತಯಾರಿ ನಡೆಸಿದ್ದರು. ಕ್ಷೇತ್ರದಲ್ಲಿ ಈಗಾಗಲೇ ಪ್ರಚಾರ ನಡೆಸುತ್ತಿದ್ದು, ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಅವರು ಜೆಡಿಎಸ್ ಮುಖಂಡ ವಿಧಾನ ಪರಿಷತ್ ಸದಸ್ಯ ಉದ್ಯಮಿ ಬಿ.ಎಂ ಫಾರೂಕ್ ಅವರ ಸಹೋದರರಾಗಿದ್ದಾರೆ.
ಉದ್ಯಮಿ ಇನಾಯತ್ ಅಲಿಯವರು ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಡೆಯಲು ಅವರು ಕಳೆದ ಎರಡು ವರ್ಷಗಳಿಂದ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರವನ್ನು ನಡೆಸಿದ್ದಾರೆ. ಇನಾಯತ್ ಅಲಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಆಪ್ತರಾಗಿದ್ದಾರೆ. ಡಿಕೆಶಿ ಸೂಚನೆಯಂತೆ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ನಡೆಸುತ್ತಿರುವ ಅವರು ಈ ಬಾರಿಯ ಕಾಂಗ್ರೆಸ್ ಅಭ್ಯರ್ಥಿಯಾಗುವ ನಿರೀಕ್ಷೆಯಲ್ಲಿದ್ದಾರೆ.
ಟಿಕೆಟ್ಗಾಗಿ ಭಾರಿ ಲಾಬಿ: ಮೊಯ್ದಿನ್ ಬಾವ, ಇನಾಯತ್ ಅಲಿ ಮಾತ್ರವಲ್ಲದೆ ಎಂ.ಶಶಿಧರ್ ಹೆಗ್ಡೆ, ಲುಕ್ಮಾನ್ ಬಂಟ್ವಾಳ, ಪುರುಷೋತ್ತಮ ಚಿತ್ರಾಪುರ, ಕವಿತಾ ಸನಿಲ್, ಪ್ರತಿಭಾ ಕುಳಾಯಿ, ಅನಿಲ್ ಕುಮಾರ್ ಪೂಜಾರಿ, ಅಲ್ತಾಫ್ ಸುರತ್ಕಲ್, ಪದ್ಮನಾಭ ಕೋಟ್ಯಾನ್ ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಮೊಯ್ದಿನ್ ಬಾವ ಮತ್ತು ಇನಾಯತ್ ಅಲಿ ಟಿಕೆಟ್ಗಾಗಿ ದೆಹಲಿ ಅಂಗಳದಲ್ಲಿ ಪೈಪೋಟಿ ನಡೆಸುತ್ತಿದ್ದಾರೆ. ಈ ಕಾರಣದಿಂದ ಕಾಂಗ್ರೆಸ್ ಪಕ್ಷ ಇವರಲ್ಲಿ ಯಾರನ್ನು ಆಯ್ಕೆ ಮಾಡುವುದೆಂಬ ಗೊಂದಲದಲ್ಲಿ ಇದೆ.
ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷರ ತವರಿನಲ್ಲಿ ಬಿಜೆಪಿಗೆ ಬಂಡಾಯದ ಬಿಸಿ; ಬಿಜೆಪಿ ಅಧಿಕೃತ ಅಭ್ಯರ್ಥಿ ವಿರುದ್ಧ ಹಿಂದೂ ಮುಖಂಡನ ಸ್ಪರ್ಧೆ