ಉಳ್ಳಾಲ: ಕಾಬೂಲ್ ನಿಂದ ಭಾರತೀಯ ವಾಯುಸೇನೆ ಏರ್ ಲಿಫ್ಟ್ ಮಾಡಿದವರಲ್ಲಿ ಉಳ್ಳಾಲ ಉಳಿಯ ನಿವಾಸಿ ಮೆಲ್ವಿನ್ ಬುದವಾರ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದು, ಅಲ್ಲಿನ ಪರಿಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಮೆಲ್ವಿನ್, ನಾನು ಕಾಬೂಲ್ ನ್ಯಾಟೋ ಪಡೆಯ ಮಿಲಿಟರಿ ಬೇಸ್ ಕ್ಯಾಂಪ್ನ ಆಸ್ಪತ್ರೆಯ ಎಲೆಕ್ಟ್ರಾನಿಕ್ ಮ್ಯೆಂಟೆನೆಸ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೆ. ಕಾಬೂಲ್‌ನಲ್ಲಿರುವ ಮಿಲಿಟರಿ ಬೇಸ್ ಆಗಸ್ಟ್ 31ರ ವರೆಗೆ ಸುರಕ್ಷಿತವಾಗಿರಲಿದೆ. ಅಲ್ಲಿಯವರೆಗೆ ತಾಲಿಬಾನ್‌ಗಳು ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಕಡಿಮೆ ಇದೆ.
ಬೇಸ್ ಖಾಲಿ ಮಾಡಲು ಆಗಸ್ಟ್ 31 ಗಡುವು ನಿಡಲಾಗಿದೆ. ಕಾರಣ ವಿದೇಶಿಯರು ತಮ್ಮ ತಮ್ಮ ದೇಶದಿಂದ ರಕ್ಷಣೆಗೆ ಆಗಮಿಸುವ ವಿಮಾನಗಳ ನಿರೀಕ್ಷೆಯಲ್ಲಿದ್ದಾರೆ. ಇನ್ನೆರಡು ದಿನಗಳಲ್ಲಿ ಕ್ಯಾಂಪ್‌ನಲ್ಲಿ ಆಹಾರದ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.
ಈ ನಡುವೆ, ಭಾರತೀಯ ರಾಯಬಾರಿ ಕಚೇರಿಯಲ್ಲಿದ್ದ ಸಿಬ್ಬಂದಿ ಹಾಗೂ ಸೆಕ್ಯೂರಿಟಿ ತಂಡವನ್ನು ಕರೆತರಲು ಬಂದಿದ್ದ ವಾಯಸೇನೆಯ ಸಿ-17 ವಿಮಾನದಲ್ಲಿ ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ 7 ಜನರ ಸಹಿತ ಒಟ್ಟು 160 ಮಂದಿಯನ್ನು ಮಂಗಳವಾರ ಬೆಳಗ್ಗೆ 5 ಗಂಟೆಗೆ ಕಾಬೂಲ್‌ನಿಂದ ಗುಜರಾತ್‌ನ ಜಾಮ್‌ನಗರದಲ್ಲಿರುವ ವಾಯುಸೇನೆ ನೆಲೆಗೆ ಕರೆತಂದಿದ್ದರು. ಅಲ್ಲಿಂದ ದಿಲ್ಲಿ ಬಳಿಕ ಬೆಂಗಳೂರು ಮಾರ್ಗವಾಗಿ ಉಳ್ಳಾಲದ ಸ್ವಗೃಹಕ್ಕೆ ಆಗಮಿಸಿದ್ದಾಗಿ ತಿಳಿಸಿದರು.