ಉಳ್ಳಾಲ: ತಲಾಖ್ ವಿರುದ್ಧ ಸುಗ್ರೀವಾಜ್ಞೆ ತರಲು ಸಾಧ್ಯವಾಗುವುದಾದರೆ, ಹೆಣ್ಮಕ್ಕಳ ರಕ್ಷಣೆ ನಿಟ್ಟಿನಲ್ಲಿ ಕಠಿಣ ಕಾನೂನು ಜಾರಿಗೊಳಿಸಿ ಸುಗ್ರೀವಾಜ್ಞೆ ಹೊರಡಿಸಿ ಎಂದು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಹೇಳಿದ್ದಾರೆ.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನ ವಿರೋಧಿ ಹಾಗೂ ಮಹಿಳಾ ದೌರ್ಜನ್ಯ ನೀತಿ ಖಂಡಿಸಿ ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ನಡೆದ ಧರಣಿ ವೇಳೆ ಅವರು ಮಾತನಾಡಿದರು. "ದೇಶದಲ್ಲಿ ಮಹಿಳೆಯರ ರಕ್ಷಣೆಗೆ ಕಠಿಣ ಕಾನೂನು ಇಲ್ಲದಿದ್ದರೆ ಭಾರತದಲ್ಲಿ ಹೆಣ್ಣಾಗಿ ಹುಟ್ಟುವುದೇ ತಪ್ಪೆನ್ನುವ ಭಾವನೆ ಬರಬಹುದು" ಎಂದು ಶಕುಂತಲಾ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
"ಹೆಣ್ಣು ಮಕ್ಕಳನ್ನು ಕಂಡಾಗ ಶುರುವಾಗುವ ಹುಚ್ಚು ಬಿಡಿಸಬೇಕಾದರೆ ಸಾರ್ವಜನಿಕ ಸ್ಥಳದಲ್ಲಿ ಕಲ್ಲೇಟು, ಗುಂಡು ಹೊಡೆದು ಕೊಲ್ಲುವುದು, ಗಲ್ಲಿಗೇರಿಸುವ ಶಿಕ್ಷೆ ಜಾರಿಯಾಗಬೇಕು. ಇಂಥ ಶಿಕ್ಷೆ ಅರಬ್ ದೇಶಗಳಲ್ಲಿರುವುದರಿಂದ ಅಲ್ಲಿ ಹೆಣ್ಮಕ್ಕಳು ಸುರಕ್ಷಿತರಾಗಿದ್ದಾರೆ" ಎಂದು ಹೇಳಿದರು.
ಧರಣಿಯಲ್ಲಿ ಯುವಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎನ್.ಎಸ್.ಕರೀಂ, ರಾಷ್ಟ್ರೀಯ ಇಂಟರ್ ಕಾರ್ಯದರ್ಶಿ ರಾಕೇಶ್ ಮಲ್ಲಿ, ಇಂಟಕ್ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ದೇವಕಿ ಉಳ್ಳಾಲ, ಎಸ್‍ಸಿಎಸ್‍ಟಿ ಘಟಕ ಅಧ್ಯಕ್ಷ ರೋಹಿತ್ ಉಳ್ಳಾಲ್, ಜಿಲ್ಲಾ ಉಪಾಧ್ಯಕ್ಷ ಸದಾಶಿವ ಉಳ್ಳಾಲ,ಮತ್ತಿತರರು ಭಾಗವಹಿಸಿದ್ದರು.