ಮಂಗಳೂರು: ದುಬೈನಿಂದ ಮಂಗಳೂರಿಗೆ ಬಂದವರನ್ನು ಖಾಸಗಿ ಲಾಡ್ಜ್ನಲ್ಲಿ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಿರುವ ಕ್ರಮಕ್ಕೆ ಮಾಜಿ ಸಚಿವ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದೇಶದಿಂದ ಬರುವ ಪ್ತಯಾಣಿಕರಿಗೆ ಹೋಟೆಲ್ ಕ್ವಾರಂಟೈನ್ ಕಡ್ಡಾಯ ಮಾಡುವುದನ್ನು ಒಪ್ಪಲಾಗುವುದಿಲ್ಲ. ಸರ್ಕಾರಿ ಕ್ವಾರಂಟೈನ್ ಇಚ್ಚಿಸುವವರಿಗೆ ಅದರ ವ್ಯವಸ್ಥೆ ಮಾಡಬೇಕು. ವಿದೇಶದಿಂದ ಬರಬೇಕೆಂಬ ಉದ್ದೇಶದಿಂದ ಅಲ್ಲಿ ಹೋಟೆಲ್ ಕ್ವಾರಂಟೈನ್‌ಗೆ ಒಪ್ಪುತ್ತೇವೆ ಎಂದು ಸಹಿ ಹಾಕಿ ಬಂದಿರಬಹುದು. ಅದರಲ್ಲಿ ತುಂಬಾ ಮಂದಿ ಕಷ್ಟದಲ್ಲಿ ಸಿಲುಕಿದ್ದಾರೆ. ಬಂಗಾರ ಮಾರಿ ಟಿಕೆಟ್ ಪಡೆದು ಬಂದಿದ್ದಾರೆ. ಮತ್ತೆ ಇಲ್ಲಿ ಬಂದು ದಿನಕ್ಕೆ 1 ಸಾವಿರದಂತೆ 14 ದಿನಕ್ಕೆ 14 ಸಾವಿರ ಕೊಡಲು ಅವರಲ್ಲಿ ಹಣ ಇರಬೇಕಲ್ಲಾ? ಎಂದರು.
ಈ ಮೊದಲೇ ಜಿಲ್ಲಾಡಳಿತದ ಜೊತೆಗೆ ಚರ್ಚಿಸಿದ್ದೆ. ನಿನ್ನೆ ವಿಮಾನ ನಿಲ್ದಾಣಕ್ಕೆ ಹೋಗಲು ಇಚ್ಚಿಸಿದ್ದರೂ ಜಿಲ್ಲಾಧಿಕಾರಿ ಹೋಗುವುದು ಬೇಡ ಎಂದು ಹೇಳಿದ ಕಾರಣಕ್ಕೆ ಅವರ ಮಾತಿಗೆ ಗೌರವ ಕೊಟ್ಟು ಹೋಗಿಲ್ಲ. ಆದರೆ, ನಿನ್ನೆ ರಾತ್ರಿ ನಡೆದ ಅವ್ಯವಸ್ಥೆಯಿಂದ ನನಗೆ ಹಲವು ದೂರವಾಣಿ ಕರೆಗಳು ಬಂದಿದೆ. ಈ ಲೋಪ ಮುಂದೆ ಆಗದಂತೆ ಜಿಲ್ಲಾಧಿಕಾರಿ ಜೊತೆಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.