ಉಳ್ಳಾಲ(ಮಂಗಳೂರು): ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್‍ಡೌನ್ ಆಗಿದ್ದ ಎರಡು ತಿಂಗಳ ಅವಧಿಯ ಬಿಲ್‍ನಲ್ಲಿ ಸಮಸ್ಯೆಗೆ ಪರಿಹಾರವಾಗಿ ಜನಪ್ರತಿನಿಧಿಗಳು, ಮ್ಕೆಸಾಂ ಅಧಿಕಾರಿಗಳು ಮತ್ತು ಬಳಕೆದಾರರು ಮುಖಾಮುಖಿಯಾಗಿ ಸಮಾಲೋಚನೆ ನಡೆಸಿ ಚರ್ಚೆ ನಡೆಸಿದರೆ ಮಾತ್ರ ಸಮಸ್ಯೆ ಬಗೆಹರಿಯಲು ಸಾಧ್ಯ. ಗ್ರಾಹಕರಲ್ಲಿ ಇರುವ ಕೆಲವೊದು ಗೊಂದಲ ಇಲ್ಲಿ ಬಗೆಹರಿಸಿದ್ದು, ಉಳಿದ ಗೊಂದಲಗಳಿಗೆ ಸರ್ಕಾರಿ ಮಟ್ಟದಲ್ಲಿ ಪರಿಹಾರ ನೀಡಲಾಗುವುದು ಎಂದು ಶಾಸಕ ಯು.ಟಿ.ಖಾದರ್ ತಿಳಿಸಿದರು.
ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಮೆಸ್ಕಾಂ) ಉಳ್ಳಾಲ ಉಪ ವಿಭಾಗ ಕಚೇರಿಯ ಆವರಣದಲ್ಲಿ ವಿದ್ಯುತ್ ಬಳಕೆದಾರರ ವಿದ್ಯುತ್ ಬಿಲ್ ವಿಚಾರಣಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರ ವಿದ್ಯುತ್ ಬಿಲ್ ಪಾವತಿಗೆ ಜೂನ್‍ವರೆಗೆ ಆವಕಾಶ ನೀಡಿದ್ದು, ಎರಡು ತಿಂಗಳಲ್ಲಿ ಸೋಂಕು ಹರಡುವ ಭೀತಿಯಿಂದ ವಿದ್ಯುತ್ ಬಿಲ್ ರೀಡರ್ಗಳು ರೀಡಿಂಗ್ ಮಾಡಿರಲಿಲ್ಲ. ಆದರೆ ಎರಡು ತಿಂಗಳ ಬಿಲ್ ರೀಡಿಂಗ್ ಮಾಡುವಾಗ ತಿಂಗಳ ಲೆಕ್ಕಾಚಾರದಲ್ಲಿ ರೀಡಿಂಗ್ ಮಾಡಬೇಕಾಗಿತ್ತು. ಈ ನಿಟ್ಟಿನಲ್ಲಿ ಮೆಸ್ಕಾಂ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಪರಿಹಾರ ನೀಡುವ ಭರವಸೆ ನೀಡಿದ್ದರು. ಬಿಲ್ ಡಿಪಾಸಿಟ್ ಕಡಿಮೆ ಮಾಡುವ ವಿಚಾರದಲ್ಲೂ ಮಾತುಕತೆ ನಡೆಸಿದ್ದು, ಜನರಲ್ಲಿ ಇರುವ ಗೊಂದಲ ನಿವಾರಣೆಗೆ ಅಧಿಕಾರಿಗಳು ಮುಂದಾಗಬೇಕು ಎಂದರು.