ಮಂಗಳೂರು: ಬಿಜೆಪಿ ಸರ್ಕಾರ ಟಿಪ್ಪು ಸುಲ್ತಾನ್ ಪಾಠವನ್ನು ಶಾಲಾ ಪಠ್ಯದಿಂದ ತೆಗೆದು ಹಾಕಿರುವುದರಿಂದ ಟಿಪ್ಪುವಿಗೆ ಯಾವುದೇ ನಷ್ಟವಿಲ್ಲ. ಟಿಪ್ಪುವಿನ ಇತಿಹಾಸ ಬರೀ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಅದಕ್ಕೆ ಬೇಕಾದ ಪುರಾವೆಗಳಿವೆ ಎಂದು ಮಾಜಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಟಿಪ್ಪುವನ್ನು ಕನ್ನಡ ಪುಸ್ತಕದಿಂದ ತೆಗೆದುಹಾಕಬಹುದು. ಆದ್ರೆ ಇಂಗ್ಲೆಂಡ್ನ ಮ್ಯೂಸಿಯಂನಲ್ಲಿರುವುದನ್ನು ತೆಗೆದುಹಾಕಲು ಸಾಧ್ಯವಿದೆಯಾ ಎಂದು ಸರ್ಕಾರಕ್ಕೆ ಪ್ರಶ್ನಿಸಿದರು.
ಟಿಪ್ಪುವಿನ ಇತಿಹಾಸ ಸೂಚಿಸುವ ಹಲವಾರು ದಾಖಲೆಗಳು ನಮ್ಮಲ್ಲಿವೆ. ಟಿಪ್ಪು ಕುರಿತು ಇತಿಹಾಸ ಹೇಳುವ ದೇವನಹಳ್ಳಿಯಲ್ಲಿರುವ ಕೋಟೆ, ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ ದೇವಾಲಯ, ಕೊಲ್ಲೂರಿನ ಟಿಪ್ಪು ಸಲಾಂ ಪೂಜೆ, ಶೃಂಗೇರಿ ದೇವಾಲಯ, ನಂಜನಗೂಡು ದೇವಾಲಯ, ಪಾಣೆ ಮಂಗಳೂರಿನ ಫಿರಂಗಿ ಮುಂತಾದ ದಾಖಲೆಗಳನ್ನು ಅಳಿಸಿ ಹಾಕಲು ಸಾಧ್ಯವಿಲ್ಲ. ರಾಷ್ಟ್ರಪತಿ ಅವರು ವಿಧಾನಸೌಧದಲ್ಲಿ ಭಾಷಣ ಮಾಡಿದಾಗ ಟಿಪ್ಪುವಿನ ಬಗ್ಗೆ ಹೊಗಳಿದ್ದನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ. ಇಂದು ಟಿಪ್ಪುವಿನ ಇತಿಹಾಸವನ್ನು ಪಠ್ಯದಿಂದ ತೆಗೆದಿದ್ದಾರೆ. ಮುಂದೆ ಮಹಾತ್ಮ ಗಾಂಧಿ, ಅಂಬೇಡ್ಕರ್ ಪಠ್ಯಗಳನ್ನು ಸಹ ತೆಗೆದು ಹಾಕಬಹುದು ಎಂದರು.
ಮಹಾನಗರ ಪಾಲಿಕೆಯ ಚುನಾವಣಾ ಟಿಕೆಟ್ ಹಂಚಿಕೆಯ ಸಂದರ್ಭದಲ್ಲಿ ಆದ ಗಲಾಟೆ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಖಾದರ್, ಅದೆಲ್ಲವೂ ಸುಳ್ಳು ಆರೋಪ. ಅದನ್ನು ನಂಬಲು ಸಾಧ್ಯವಿಲ್ಲ. ಟಿಕೆಟ್ ಆಕಾಂಕ್ಷಿಗಳು ಬಹಳಷ್ಟು ಮಂದಿ ಇದ್ದಾರೆ. ತಳಮಟ್ಟದ, ಬೂತ್ ಮಟ್ಟದ ವಾರ್ಡ್ ಮಟ್ಟದ ಮುಖಂಡರೊಂದಿಗೆ ಚರ್ಚಿಸಿ ಜಿಲ್ಲಾಧ್ಯಕ್ಷರು, ಚುನಾವಣಾ ರಾಜ್ಯ ಪರಿವೀಕ್ಷಣಾಧಿಕಾರಿ ಟಿಕೆಟ್ ಹಂಚಿಕೆ ಮಾಡಿದ್ದಾರೆ. ಅಲ್ಲದೆ ಅರ್ಜಿ ಹಾಕಿದವರಿಗೆಲ್ಲಾ ಟಿಕೆಟ್ ದೊರಕಬೇಕೆಂಬ ನಿಯಮ ಇಲ್ಲವೆಂದು ಖಾದರ್ ಹೇಳಿದರು.
ಆಶಾ ಡಿಸಿಲ್ವಾ ಕಾಂಗ್ರೆಸ್ ನಿಂದ ಬಿಜೆಪಿಗೆ ಹೋದ ಬಗ್ಗೆ ಪ್ರತಿಕ್ರಿಯಿಸಿದ ಖಾದರ್ ಅವರು, ಬಿಜೆಪಿಯವರಿಗೆ ಇಂತಹ ದುರ್ಗತಿ ಬರುತ್ತದೆ ಎಂದು ನಾನು ತಿಳಿದುಕೊಂಡಿರಲಿಲ್ಲ. ಅವರಿಗೆ ಎಂಎಲ್ಎಗಳು ಮಾತ್ರ ಬೇಕು ಅಂದುಕೊಂಡಿದ್ದೆವು. ಆದರೆ ಅವರಿಗೆ ನಗರ ಪಾಲಿಕೆಯ ಚುನಾವಣೆಗೆ ನಿಲ್ಲಲೂ ಜನ ಇಲ್ಲ. ಅದನ್ನೂ ಕಾಂಗ್ರೆಸ್ ನಿಂದ ಎಳೆದುಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.