ಬಂಟ್ವಾಳ: ಅರ್ಜಿ ಸಲ್ಲಿಸಿದವರಿಗೆ ಪಡಿತರ ಚೀಟಿ ಕೊಡದ ರಾಜ್ಯ ಸರ್ಕಾರವು ಇರುವ ಪಡಿತರ ಚೀಟಿಗಳನ್ನೇ ರದ್ದು ಮಾಡುತ್ತಿದೆ. ಹೀಗಾಗಿ ಪಡಿತರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿದೆ ಎಂದು ಶಾಸಕ ಯು.ಟಿ.ಖಾದರ್ ಬಂಟ್ವಾಳ ತಾಲೂಕಿನ ತುಂಬೆಯಲ್ಲಿ ಆರೋಪಿಸಿದರು.
ಪತ್ರಕರ್ತರ ಜತೆ ಮಾತನಾಡಿದ ಅವರು, ಹಿಂದೆ ನಾವು ಮಾಡಿದ ವ್ಯವಸ್ಥೆಯನ್ನು ಮುಂದುವರೆಸುವ ಆಸಕ್ತಿ ಪ್ರಸ್ತುತ ಸರ್ಕಾರಕ್ಕೆ ಇಲ್ಲವಾಗಿದೆ. ಸರ್ಕಾರಕ್ಕೆ ರೇಶನ್ ಕಾರ್ಡ್ ಕಟ್ ಮಾಡುವುದರಲ್ಲಿರುವ ಆಸಕ್ತಿ ಕಾರ್ಡ್ ವಿತರಣೆಯಲ್ಲಿ ತೋರಿಸುತ್ತಿಲ್ಲ. ಈ ಎರಡು ತಿಂಗಳಲ್ಲಿ ಎಪಿಎಲ್-ಬಿಪಿಎಲ್ ಎಂದು ನೋಡದೆ ಯಾರೂ ನ್ಯಾಯ ಬೆಲೆ ಅಂಗಡಿಯ ಮುಂದೆ ನಿಲ್ಲುತ್ತಾರೋ ಅವರಿಗೆ ಅಕ್ಕಿ ಕೊಡುವುದು ಸರ್ಕಾರದ ಜವಾಬ್ದಾರಿ ಎಂದರು.
ರಾಜ್ಯ ಸರ್ಕಾರವು ಕೋವಿಡ್ ಸಂದರ್ಭ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದು, ಅದರಲ್ಲಿ ಕರಾವಳಿಯ ಆಧಾರಸ್ತಂಭ ಮೀನುಗಾರರನ್ನು ಕಡೆಗಣಿಸಿರುವುದು ಖಂಡನೀಯ ಎಂದರು. ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ವೈದ್ಯರ ವೇತನ ಬಾರದೇ ಇದ್ದು, ಇದನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಜತೆಗೆ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿರುವ ಇ-ಸರ್ವೇ ಜವಾಬ್ದಾರಿಯನ್ನು ಮುಂದಕ್ಕೆ ಹಾಕಲು ಆಗ್ರಹಿಸಲಾಗಿದೆ ಎಂದರು.
ದೇರಳಕಟ್ಟೆ ಫಾದರ್ ಮುಲ್ಲರ್ ಹೋಮಿಯೋಪತಿ ಆಸ್ಪತ್ರೆಯಲ್ಲಿ 50 ಬೆಡ್, ಯೇನಪೋಯ ಸಂಸ್ಥೆಯ ಅಪಾರ್ಟ್ಮೆಂಟ್ನಲ್ಲಿ 70 ಬೆಡ್ ಹಾಗೂ ಯುನಿವರ್ಸಿಟಿಯ ಹಾಸ್ಟೆಲ್ನಲ್ಲಿ 100 ಬೆಡ್ಗಳ ವಿಶ್ರಾಂತಿ ಕೇಂದ್ರಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.