ಮಂಗಳೂರು : ಸಂತ್ರಸ್ತರ ಮೇಲೆ ಲಾಠಿ ಚಾರ್ಜ್ ಮಾಡಿಸುವುದು ಸರಿಯಲ್ಲ. ಕಣ್ಣೀರು ಒರೆಸುವುದು ಬಿಟ್ಟು ಕಷ್ಟದಲ್ಲಿರುವವರಿಗೆ ಲಾಠಿ ಏಟು ನೀಡುವುದು ಮಾನವೀಯತೆಯಲ್ಲ ಎಂದು ಮಾಜಿ ಸಚಿವ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಕೃತಿ ವಿಕೋಪವಾದಾಗ ಹೇಗೆ ನಡೆದುಕೊಳ್ಳಬೇಕೆಂದು ನಮ್ಮ ಮೈತ್ರಿ ಸರ್ಕಾವನ್ನು ನೋಡಿ ಮುಖ್ಯಮಂತ್ರಿಗಳು ಕಲಿಯಬೇಕು. ಸಹಾಯ ಕೇಳಲು ಬಂದವರ ಮೇಲೆ ಮಾನವೀಯತೆ ಇಲ್ಲದೇ ಲಾಠಿ ಚಾರ್ಜ್ ಮಾಡಿಸಿದ್ದಾರೆ. ಹಿಂದಿನ ಸಲ ಅಧಿಕಾರದಲ್ಲಿರುವಾಗ ರೈತರು ಗೊಬ್ಬರ ಕೇಳಿದಕ್ಕೆ ಅವರಿಗೆ ಗುಂಡು ಹೊಡೆದರು. ಜನತೆ ಮನೆ- ಮಠ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಮಾತನಾಡಿದಾಗ ತಾಳ್ಮೆಯಿಂದ ಕೇಳುವ ಬದಲು ಈ ರೀತಿ ನಡೆದುಕೊಂಡದ್ದು ಸರಿಯಲ್ಲ. ಮುಖ್ಯಮಂತ್ರಿ ಗಳು ತಕ್ಷಣವೇ ಆ ಜನರಲ್ಲಿ ಕ್ಷಮೆ ಕೇಳಬೇಕು ಎಂದು ಗುಡುಗಿದರು.
ಕಳೆದ ಬಾರಿಯ ಕೊಡಗು ಮಾದರಿ ಪರಿಹಾರ ಕಾರ್ಯ ಈ ಬಾರಿ ರಾಜ್ಯದಲ್ಲಿ ಅನುಷ್ಠಾನವಾಗಲಿ. ಅಲ್ಲದೇ ಇಡೀ ದೇಶದಲ್ಲಿ ಇದೇ ಮಾದರಿ ಪರಿಹಾರ ಕಾರ್ಯ ಅನುಷ್ಠಾನಕ್ಕೆ ತರಲು ಪ್ರಧಾನಿ ಮೋದಿಯವರು ಮುಂದೆ ಬರಬೇಕು. ಬೇರೆ ರಾಜ್ಯವನ್ನು ರಕ್ಷಿಸಲು ಹೋಗಿ ನಮ್ಮ ರಾಜ್ಯದಲ್ಲಿ ನೆರೆ ಬಂದು ಎಲ್ಲವನ್ನು ಜನರು ಕಳೆದುಕೊಂಡಿದ್ದಾರೆ. ಆದ್ದರಿಂದ ಕೇಂದ್ರ ಸರಕಾರ ಕರ್ನಾಟಕಕ್ಕೆ ವಿಶೇಷ ಮಹತ್ವ ನೀಡಿ, ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.