ಮಂಗಳೂರು: ದ.ಕ ಜಿಲ್ಲೆಯಲ್ಲಿ ಇಂದು 4 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಇಬ್ಬರು ಸೋಂಕಿತರು ಸೇರಿದಂತೆ 15 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ.
ಸೌದಿ ಅರೇಬಿಯಾದಿಂದ ಬಂದ 30 ವರ್ಷದ ಯುವಕ, ಕುವೈತ್ನಿಂದ ಬಂದ 57 ವರ್ಷದ ಪುರುಷ, ಮಹಾರಾಷ್ಟ್ರದಿಂದ ಬಂದ 21 ವರ್ಷದ ಯುವತಿ, ರೋಗಿ ಸಂಖ್ಯೆ-8005ರ ಸಂಪರ್ಕ ಹೊಂದಿದ್ದ 21 ವರ್ಷದ ಯುವಕನಿಗೆ ಇಂದು ಕೊರೊನಾ ದೃಢಪಟ್ಟಿದೆ. ಇಂದು ಕೊರೊನಾ ಪಾಸಿಟಿವ್ ಇರುವ ಇಬ್ಬರು ರೋಗಿಗಳು ಸೇರಿದಂತೆ 15 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ.
81 ಮತ್ತು 76 ವರ್ಷದ ಇಬ್ಬರು ವೃದ್ಧರು ಕಳೆದ ಒಂದು ತಿಂಗಳಿಗೂ ಅಧಿಕ ದಿನಗಳಿಂದ ಆಸ್ಪತ್ರೆಯಲ್ಲಿ ಕೋವಿಡ್ಗೆ ಚಿಕಿತ್ಸೆ ಪಡೆಯುತ್ತಿದ್ದರೂ ಗುಣಮುಖವಾಗಿರಲಿಲ್ಲ. ಅವರನ್ನು ಏಳು ಬಾರಿ ಟೆಸ್ಟ್ ಮಾಡಿದರೂ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಕೋವಿಡ್-19 ಟೆಕ್ನಿಕಲ್ ಅಡ್ವೈಸರಿ ಕಮಿಟಿಗೆ ಕಳುಹಿಸಲಾಗಿತ್ತು. ಅವರ ತೀರ್ಮಾನದಂತೆ ಇವರಿಬ್ಬರನ್ನೂ ಪಾಸಿಟಿವ್ ಇದ್ದರೂ ಡಿಸ್ಚಾರ್ಜ್ ಮಾಡಲಾಗಿದೆ. 14 ದಿನಗಳ ಬಳಿಕ ಅವರನ್ನು ಮತ್ತೊಮ್ಮೆ ಟೆಸ್ಟ್ ಮಾಡಲಾಗುವುದು ಎಂದು ದ.ಕ ಜಿಲ್ಲಾ ಆರೋಗ್ಯಾಧಿಕಾರಿ ರಾಮಚಂದ್ರ ಬಾಯರಿ ತಿಳಿಸಿದ್ದಾರೆ. ಇನ್ನುಳಿದ 13 ಮಂದಿಯ ಗಂಟಲು ದ್ರವ ಪರೀಕ್ಷೆ ಎರಡು ಬಾರಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ಗುಣಮುಖರೆಂದು ಘೋಷಿಸಿ ಮನೆಗೆ ಕಳುಹಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ 426 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಇದರಲ್ಲಿ 221 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಎಂಟು ಮಂದಿ ಸಾವನ್ನಪ್ಪಿದ್ದು, 197 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.