ಮಂಗಳೂರು: ಕೋವಿಡ್ ಸೋಂಕಿನ ಈ ಸಂಕಷ್ಟ ಕಾಲದಲ್ಲಿ ಕರ್ತವ್ಯದ ಜೊತೆ- ಜೊತೆಗೆ ನಿತ್ಯ ಭಿಕ್ಷಕರು, ನಿರಾಶ್ರಿತರ ಹೊಟ್ಟೆ ತುಂಬಿಸುವ ಕಾರ್ಯವನ್ನು ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಪೊಲೀಸರಿಬ್ಬರು ಮಾಡುತ್ತಿದ್ದಾರೆ.
ಮಂಗಳೂರಿನ ಪಾಂಡೇಶ್ವರ ಇಕನಾಮಿಕ್ ಆ್ಯಂಡ್ ನಾರ್ಕೊಟಿಕ್ ಹಾಗೂ ಕ್ರೈಂ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಶಿವಕುಮಾರ್ ರಾವ್ ಹಾಗೂ ಸುರತ್ಕಲ್ ಪೊಲೀಸ್ ಠಾಣೆಯ ಹೆಡ್ಕಾನ್ಸ್ ಸ್ಟೇಬಲ್ ಸುನಿಲ್ ಕುಮಾರ್ ಈ ಮಾನವೀಯ ಕಾರ್ಯದಲ್ಲಿ ನಿರತರಾದವರು. ಕಳೆದ ಒಂಬತ್ತು ದಿನಗಳಿಂದ ಇವರು ನಿತ್ಯವೂ ಬೀದಿಯಲ್ಲಿ ಬಿದ್ದವರ ಹೊಟ್ಟೆ ತಣಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.
![ಆಹಾರ ವಿತರಣೆ](https://etvbharatimages.akamaized.net/etvbharat/prod-images/kn-mng-06-police-helping-script-ka10015_10052021224603_1005f_1620666963_161.jpg)
ಕೋವಿಡ್ ಕರ್ಫ್ಯೂನಿಂದ ಎಲ್ಲವೂ ಸ್ತಬ್ಧವಾಗಿದೆ. ಆದರೆ ಭಿಕ್ಷಕರು, ನಿರಾಶ್ರಿತರು, ಬೀದಿಪಾಲಾದವರ ಬಗ್ಗೆ ಕನಿಕರದಿಂದ ಈ ಮಾನವೀಯ ಕಾರ್ಯದಲ್ಲಿ ತೊಡಗಿರುವ ಈ ಪೊಲೀಸರಿಬ್ಬರು ಉರ್ವಸ್ಟೋರ್, ಹಳೆಯ ಬಸ್ ನಿಲ್ದಾಣ, ಕಂಕನಾಡಿ, ಪಂಪ್ ವೆಲ್ಗಳಲ್ಲಿ ಇರುವ ಹಲವು ಮಂದಿ ಭಿಕ್ಷುಕರು, ನಿರಾಶ್ರಿತರಿಗೆ ಊಟ ಒದಗಿಸುತ್ತಿದ್ದಾರೆ.
ಅನ್ನ, ಪಲ್ಯ, ಕೋಳಿ ಮಾಂಸದ ಸಾರು ಸೇರಿ ನಿತ್ಯವೂ 150 ಮಂದಿಗೆ ಈ ಪೊಲೀಸ್ ಜೋಡಿ ಊಟ ಒದಗಿಸುತ್ತಿದೆ. ಜೊತೆಗೆ ಕುಡಿಯುವ ನೀರು ಮಾಸ್ಕ್ಗಳನ್ನು ನೀಡಲಾಗುತ್ತದೆ. ಶಿವಕುಮಾರ್ ರಾವ್ ಹಾಗೂ ಸುನಿಲ್ ಕುಮಾರ್ ಇಬ್ಬರೂ ಕೋವಿಡ್ ವಾರಿಯರ್ಸ್ಗಳಾಗಿ ಕರ್ತವ್ಯದಲ್ಲಿ ಇರುವುದರಿಂದ ರಾಮಭವನ್ ಹೊಟೇಲ್ನ ತಮ್ಮ ಸ್ನೇಹಿತನಿಗೆ ಅಕ್ಕಿ, ದಿನಸಿ ಸಾಮಾಗ್ರಿಗಳನ್ನು ನೀಡಿ ಊಟಕ್ಕೆ ಸಿದ್ಧಪಡಿಸುತ್ತಾರೆ. ಆ ಸ್ನೇಹಿತ ಉಚಿತವಾಗಿ ಊಟ ಸಿದ್ಧ ಪಡಿಸುತ್ತಾರಂತೆ.
![ಆಹಾರ ವಿತರಣೆ](https://etvbharatimages.akamaized.net/etvbharat/prod-images/kn-mng-06-police-helping-script-ka10015_10052021224603_1005f_1620666963_161.jpg)
ಊಟ ವಿತರಿಸುವ ಕಾರ್ಯವನ್ನು ಮಹಾಕಾಳಿ ಪಡ್ಪುವಿನ ಆದಿ ಮಹೇಶ್ವರಿ ಕ್ರಿಕೇಟರ್ಸ್ನ ಯುವಕರಿಗೆ ವಹಿಸಲಾಗಿದೆ. ಈ ಮೂಲಕ ಈ ಪೊಲೀಸ್ ಜೋಡಿ ಸದ್ದು, ಸುದ್ದಿಯಿಲ್ಲದೆ ನೂರಾರು ಮಂದಿಯ ಹೊಟ್ಟೆ ತಣಿಸುವ ಕಾರ್ಯದಲ್ಲಿ ತೊಡಗಿದೆ. ಇಂತಹ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಮನಸ್ಸನ್ನು ಹೊಂದಿರುವ ಈ ಪೊಲೀಸ್ ಜೋಡಿಯಿಂದ ಇನ್ನಷ್ಟು ಮಂದಿಯ ಹೊಟ್ಟೆ ತಣಿಸುವ ಕಾರ್ಯ ಆಗಲಿ ಎಂಬುದೇ ಈಟಿವಿ ಭಾರತದ ಆಶಯ.