ಮಂಗಳೂರು: ನಗರದ ಪಡೀಲ್ ಶಿವನಗರದಲ್ಲಿ ನಿನ್ನೆ ರಾತ್ರಿ ಆವರಣದ ಗೋಡೆ ಕುಸಿದು ಮೃತಪಟ್ಟ ಕುಟುಂಬಕ್ಕೆ ಶಾಸಕ ವೇದವ್ಯಾಸ ಕಾಮತ್ ಅವರು ತಲಾ 5 ಲಕ್ಷ ರೂ.ನಂತೆ 10 ಲಕ್ಷ ರೂ. ಪರಿಹಾರ ಚೆಕ್ ವಿತರಿಸಿದರು.
ಉಪ್ಪಿನಂಗಡಿ ಮೂಲದ ಹಾಗೂ ಪ್ರಸ್ತುತ ಪಡೀಲ್‌ನ ಶಿವನಗರದ ನಿವಾಸಿ ರಾಮಣ್ಣ ಎಂಬವರ ಮಕ್ಕಳಾದ ವರ್ಷಿಣಿ (9) ಹಾಗೂ ವೇದಾಂತ್(7) ನಿನ್ನೆ ರಾತ್ರಿ ಕುಸಿದು ಬಿದ್ದ ಆವರಣ ಗೋಡೆಗಳ ಅವಶೇಷಗಳಡಿಯಲ್ಲಿ ಸಿಲುಕಿ ಮೃತಪಟ್ಟಿದ್ದರು.
ಇಂದು ಮಕ್ಕಳ ಪಾರ್ಥಿವ ಶರೀರವನ್ನು ವೀಕ್ಷಿಸಲು ಬಂದ ಶಾಸಕ ವೇದವ್ಯಾಸ ಕಾಮತ್, ಮಕ್ಕಳ ತಾಯಿಗೆ ತಲಾ 5 ಲಕ್ಷ ರೂ.ಗಳ ಪರಿಹಾರ ಚೆಕ್ ವಿತರಣೆ ಮಾಡಿದರು. ಅಲ್ಲದೆ ಮಂಗಳೂರಿನ ಸೇವಾಂಜಲಿ ಟ್ರಸ್ಟ್ ನವರೂ ಸಹ 1 ಲಕ್ಷ ರೂ. ಪರಿಹಾರ ಚೆಕ್ ವಿತರಣೆ ಮಾಡಿದರು.
ಈ ಸಂದರ್ಭ ಮಂಗಳೂರು ತಹಸೀಲ್ದಾರ್ ಗುರುಪ್ರಸಾದ್, ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.