ಮಂಗಳೂರು: ಇಲ್ಲಿನ ಪಿಲಿಕುಳ ನಿಸರ್ಗಧಾಮದಲ್ಲಿದ್ದ ಎಂಟು ವರ್ಷ ಪ್ರಾಯದ ಚಿಂಟು ಎಂದು ಕರೆಯಲ್ಪಡುವ ಗರ್ಭ ಧರಿಸಿದ್ದ ಚಿರತೆಯೊಂದಕ್ಕೆ ಇಲ್ಲಿನ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಗರ್ಭದಿಂದ ಎರಡು ಮರಿಗಳನ್ನು ಹೊರತೆಗೆದಿದ್ದಾರೆ. ಆದರೆ, ಪ್ರಸವ ವೇಳೆ ಸಮಸ್ಯೆಯುಂಟಾಗಿದ್ದರಿಂದ ದುರದೃಷ್ಟವಶಾತ್ ಎರಡೂ ಚಿರತೆ ಮರಿಗಳು ಹೊಟ್ಟೆಯಲ್ಲೇ ಸಾವನ್ನಪ್ಪಿವೆ ಎನ್ನಲಾಗುತ್ತಿದೆ.
ಚಿಂಟುವಿಗೆ ಪ್ರಸವ ವೇಳೆ ಸಮಸ್ಯೆಯುಂಟಾಗಿದ್ದರಿಂದ ಅದರ ಸ್ಥಿತಿ ಗಂಭೀರವಾಗಿತ್ತು. ಈ ಕಾರಣ ತುರ್ತಾಗಿ ಶಸ್ತ್ರಚಿಕಿತ್ಸೆ ನಡೆಸಿ ಗರ್ಭದಲ್ಲಿದ್ದ ಎರಡು ಮರಿಗಳನ್ನು ಹೊರ ತೆಗೆಯಲಾಗಿತ್ತು. ಆದರೆ, ಹೊರತೆಗೆಯುವ ಮೊದಲೇ ಎರಡು ಮರಿಗಳು ಸಾವನ್ನಪ್ಪಿವೆ. ಶಸ್ತ್ರಚಿಕಿತ್ಸೆ ನಂತರ ಚಿರತೆಯು ಚೇತರಿಸಿಕೊಳ್ಳುತ್ತಿದ್ದು, ಮೃಗಾಲಯದ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಚಿರತೆಯ ಆರೋಗ್ಯದ ಬಗ್ಗೆ ನಿಗಾ ವಹಿಸಿದ್ದಾರೆ. ಮೃಗಾಲಯದ ವೈದ್ಯಾಧಿಕಾರಿಗಳಾದ ಡಾ ವಿಷ್ಣುದತ್ ಮತ್ತು ಡಾ. ಯಶಸ್ವಿ ಎಂಬುವರು ಶಸ್ತ್ರಚಿಕಿತ್ಸೆ ನಡೆಸಿದರು.
ಚಿಂಟು ಚಿರತೆ ಎಂಟು ವರ್ಷಗಳ ಹಿಂದೆ ತಾಯಿಯಿಂದ ಪರಿತ್ಯಕ್ತವಾಗಿ ಸಿಕ್ಕಿತ್ತು. ಐದು ದಿನದ ಮರಿ ಚಿರತೆಯನ್ನು ಮೂಡಬಿದ್ರೆ ಸಮೀಪದಿಂದ ರಕ್ಷಿಸಿ ಚಿಂಟು ಎಂದು ಹೆಸರಿಟ್ಟು ಪಿಲಿಕುಳ ಮೃಗಾಲಯದಲ್ಲಿ ಪೋಷಿಸಲಾಗಿತ್ತು ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಹೆಚ್ ಜೆ ಭಂಡಾರಿ ತಿಳಿಸಿದ್ದಾರೆ.