ಮಂಗಳೂರು : ಡ್ರಗ್ಸ್ ಮಾರಾಟ ಪ್ರಕರಣದಲ್ಲಿ ದೊಡ್ಡ ಜಾಲವೊಂದರ ಬೆನ್ನು ಹತ್ತಿದ ಪೊಲೀಸರು ನೈಜೀರಿಯಾ ಪ್ರಜೆ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ನೈಜೀರಿಯಾ ದೇಶದ ಪ್ರಜೆ ಸ್ಟ್ಯಾನ್ಲಿ ಚಿಮ ಮತ್ತು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಉಪ್ಪಳದ ಮಹಮ್ಮದ್ ರಮೀಝ್ ಬಂಧಿತ ಆರೋಪಿಗಳು.
ಮಂಗಳೂರಿನ ಕೊಣಾಜೆ ಠಾಣೆ ಪೊಲೀಸರು 2 ಡ್ರಗ್ಸ್ ಪ್ರಕರಣದಲ್ಲಿ ಇತ್ತೀಚೆಗೆ 5 ಮಂದಿಯನ್ನು ಬಂಧಿಸಿ, ಆರೋಪಿಗಳಿಂದ 170 ಗ್ರಾಂ ಮತ್ತು 65 ಗ್ರಾಂ ತೂಕದ ಎಂಡಿಎಂಎಗಳನ್ನು ವಶಪಡಿಸಿಕೊಂಡಿದ್ದರು. ಈ ಎರಡು ಪ್ರಕರಣದಲ್ಲಿ ಇಂದು ಬಂಧಿತರಾದ ಇಬ್ಬರು ಪ್ರಮುಖ ಆರೋಪಿಗಳಾಗಿದ್ದರು. ಇವರನ್ನು ಕೊಣಾಜೆ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಮೂಲಕ ಮಂಗಳೂರು ಪೊಲೀಸರು ಬೃಹತ್ ಡ್ರಗ್ ಜಾಲವನ್ನು ಬೇಧಿಸುವಲ್ಲಿ ಸಫಲರಾಗಿದ್ದಾರೆ.