ಮಂಗಳೂರು: ಆಸ್ಪತ್ರೆಯಲ್ಲಿ ವಿಶೇಷ ಚೇತನ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಮಂಗಳೂರು ಪೊಲೀಸರು ಆರೋಪಿ ಮತ್ತು ಕೃತ್ಯಕ್ಕೆ ಸಹಕರಿಸಿದ ಮಹಿಳೆಯನ್ನು ಬಂಧಿಸಿದ್ದಾರೆ. ಮುಂಬೈನ ಅಬ್ದುಲ್ ಹಲೀಂ (37) ಮತ್ತು 22 ವರ್ಷದ ಮಹಿಳೆಯು ಬಂಧಿತ ಆರೋಪಿಗಳಾಗಿದ್ದಾರೆ.
ಘಟನೆ ವಿವರ: ಆಗಸ್ಟ್ 10ರಂದು ಬಿಹಾರ ಮೂಲದ ಈಗ ಮುಂಬೈನಲ್ಲಿ ವಾಸವಿರುವ ಅಬ್ದುಲ್ ಹಲೀಂ ಹಾಗೂ ಆತನ ಪರಿಚಯಸ್ಥನೊಬ್ಬ ಬೈಕಿನಲ್ಲಿ ಕಾಸರಗೋಡಿಗೆ ಹೋಗಿ ವಾಪಸ್ ಬರುತ್ತಿದ್ದಾಗ ಮಂಜೇಶ್ವರ ಹೊಸಂಗಡಿ ಮಧ್ಯೆ ವಾಹನ ಅಪಘಾತವಾಗಿತ್ತು. ಇದರಿಂದ ಇಬ್ಬರೂ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಇಬ್ಬರೂ ಗಾಯಾಳುಗಳು ಆಸ್ಪತ್ರೆಯ ಒಂದೇ ರೂಮಿನಲ್ಲಿ ಮಧ್ಯೆ ಸ್ಕ್ರೀನ್ ಹಾಕಿಸಿ, ಚಿಕಿತ್ಸೆ ಪಡೆಯುತ್ತಿದ್ದರು. ಆರೋಪಿತ ಮಹಿಳೆಯು ಅಪಘಾತದಲ್ಲಿ ಗಾಯಗೊಂಡ ಮತ್ತೋರ್ವನ ಪತ್ನಿಯಾಗಿದ್ದಾರೆ.
ಪೊಲೀಸರು ಹೇಳುವುದೇನು?: ಹಲೀಂ ಜೊತೆ ಅಪಘಾತದಲ್ಲಿ ಗಾಯಗೊಂಡ ಮತ್ತೋರ್ವನ ಸಂಬಂಧಿಯೊಬ್ಬ ಈ ಬಗ್ಗೆ ವಿಚಾರಿಸಲು ಮಂಜೇಶ್ವರ ಪೊಲೀಸ್ ಠಾಣೆಗೆ ಹೋಗಿದ್ದು, ಆ ಸಮಯದಲ್ಲಿ ತಮ್ಮ ಜೊತೆ ಕರೆದುಕೊಂಡು ಬಂದಿದ್ದ ವಿಶೇಷ ಚೇತನ ಅಪ್ರಾಪ್ತ ಮಗಳನ್ನು ಆರೋಪಿ ಮಹಿಳೆಯ ಜೊತೆ ಆಸ್ಪತ್ರೆಯಲ್ಲಿ ಬಿಟ್ಟು ಹೋಗಿದ್ದರು. ಈ ವೇಳೆ, ಮಹಿಳೆಯು ಆರೋಪಿತನಾದ ಅಬ್ದುಲ್ ಹಲೀಂ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ್ದಾಳೆ. ಇದನ್ನು ವಿಶೇಷ ಚೇತನ ಅಪ್ರಾಪ್ತೆ ನೋಡಿರುವುದನ್ನು ಆಕೆ ಕಂಡಿದ್ದಾಳೆ. ತದನಂತರ ಬಾಲಕಿಯನ್ನು ಕರೆದು ಬೆಡ್ ಮೇಲೆ ಕುಳ್ಳಿರಿಸಿದ್ದು, ಬಳಿಕ ಆರೋಪಿ ಅಬ್ದುಲ್ ಹಲೀಂ ಅಪ್ರಾಪ್ತೆ ಮೇಲೆ ಮಹಿಳೆಯ ಸಹಕಾರದೊಂದಿಗೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ನೊಂದ ಬಾಲಕಿಯ ತಾಯಿ ನೀಡಿದ ದೂರಿನಂತೆ ಮಂಗಳೂರು ಮಹಿಳಾ ಠಾಣೆಯಲ್ಲಿ ಪೋಕ್ಸೋ ಕಾಯಿದೆ ಅಡಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಆರೋಪಿ ಮಹಿಳೆಯನ್ನು ಆಗಸ್ಟ್ 16ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಪ್ರಕರಣದಲ್ಲಿ ಆರೋಪಿ ಅಬ್ದುಲ್ ಹಲೀಂ ಆಗಸ್ಟ್ 16ರಂದು ಮಂಗಳೂರಿನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ಬಗ್ಗೆ ಮಂಗಳೂರು ಮಹಿಳಾ ಠಾಣೆ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿತ್ತು. ಬಳಿಕ ಗೋವಾದ ಮಡಗಾಂವ್ ಪೊಲೀಸರಿಗೆ ಮಾಹಿತಿ ನೀಡಿ, ಅವರ ಸಹಕಾರದೊಂದಿಗೆ ಬಂಧಿಸಲಾಗಿದೆ. ಬಳಿಕ ಮಹಿಳೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಆರೋಪಿ ಕಾಲಿಗೆ ಗುಂಡೇಟು