ಮಂಗಳೂರು: ಬಂಟ್ವಾಳ ತಾಲೂಕಿನ ವಿಟ್ಲ ಸಮೀಪ ನವೀನ್ ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಸ್ಥಳೀಯ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕೇಪು ನೀರ್ಕಜೆ ನಿವಾಸಿ ಅಜಯ್ ಪ್ರಸಾದ್ (23), ಅಳಿಕೆ ಮಿತ್ತಳಿಕೆ ನಿವಾಸಿ ಪ್ರಖ್ಯಾತ್ (23) ಬಂಧಿತರು. ಶನಿವಾರ ರಾತ್ರಿ ನವೀನ್ ಕೇಪು ಗ್ರಾಮದ ನೀರ್ಕಜೆ ಬಸ್ಸು ತಂಗುದಾಣದಲ್ಲಿ ನಿಂತಿದ್ದ ವೇಳೆ ಅಜಯ್ ಮತ್ತು ಸಹಚರರು ಬಂದು ತಮ್ಮ ತಮ್ಮನ ಮೇಲೆ ದಾಳಿ ಮಾಡಿದ ವಿಚಾರವನ್ನು ತೆಗೆದು ಮಾರಕಾಸ್ತ್ರಗಳಿಂದ ನವೀನನ ಹೊಟ್ಟೆ ಮತ್ತು ದೇಹದ ಇತರ ಭಾಗಗಳಿಗೆ ತಿವಿದಿದ್ದಾರೆ ಎಂದು ತಿಳಿದುಬಂದಿದೆ.
ಪ್ರಖ್ಯಾತ್ನು ನವೀನ್ ಮೇಲೆ ಹಲ್ಲೆ ಮಾಡುತ್ತಿದ್ದಾಗ ಗಲಾಟೆ ಬಿಡಿಸಲು ಬಂದ ಬಡೆಕೋಡಿ ಗಣೇಶನ ಬೆರಳಿಗೂ ಕಡಿದಿದ್ದಾನೆ ಎಂಬ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ ಡಾ. ಲಕ್ಷ್ಮೀ ಪ್ರಸಾದ್, ಡಿವೈಎಸ್ಪಿ ವೆಲೆಂಟನ್ ಡಿಸೋಜ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಟಿ. ಡಿ. ನಾಗರಾಜ್ ಅವರ ನೇತೃತ್ವದಲ್ಲಿ ವಿಟ್ಲ ಪಿ. ಎಸ್. ಐ ವಿನೋದ್ ರೆಡ್ಡಿ ಅವರ ಸೂಚನೆಯಂತೆ ಸಿಬ್ಬಂದಿ ಜಯಕುಮಾರ್, ಪ್ರಸನ್ನ, ಲೋಕೇಶ್, ಪ್ರತಾಪ ರೆಡ್ಡಿ, ವಿನಾಯಕ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.