ಸುಳ್ಯ(ದಕ್ಷಿಣ ಕನ್ನಡ): ಸುಳ್ಯದ ಬೆಳ್ಳಾರೆಯಲ್ಲಿ ಹತ್ಯೆಯಾದ ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಪ್ರಕರಣವನ್ನು ಕೆಲವೇ ದಿನಗಳಲ್ಲಿ ಭೇದಿಸಿ, ಆರೋಪಿಗಳನ್ನು ಪತ್ತೆ ಹಚ್ಚಿದ ಎಲ್ಲಾ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಇಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಪಶ್ಚಿಮ ವಲಯ ಮಂಗಳೂರು ಪೊಲೀಸ್ ಮಹಾನಿರೀಕ್ಷಕರಾದ ದೇವಜ್ಯೋತಿ ರೇ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಕರಣ ದಾಖಲಾದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸೂಕ್ಷ್ಮ ವಾತಾವರಣ ಸೃಷ್ಟಿಯಾಗಿತ್ತು. ಯಾವುದೇ ಸುಳಿವೂ ಇಲ್ಲದೇ ಇದ್ದ ಈ ಪ್ರಕರಣದಲ್ಲಿ ಆರೋಪಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚುವುದು ಪೊಲೀಸರಿಗೆ ದೊಡ್ಡ ಮಟ್ಟದ ಸವಾಲಾಗಿತ್ತು.
ಆರೋಪಿಗಳನ್ನು ಪತ್ತೆ ಹಚ್ಚಲು ಬೆಳ್ಳಾರೆ, ಸುಳ್ಯ, ಸುಬ್ರಹ್ಮಣ್ಯ , ಕಡಬ, ವಿಟ್ಲ, ಬೆಳ್ತಂಗಡಿ, ಪುತ್ತೂರು, ಬಂಟ್ವಾಳ ಹಾಗೂ ಪ್ರಮುಖವಾಗಿ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಪಶ್ಚಿಮ ವಲಯದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ತನಿಖಾ ತಂಡವನ್ನು ರಚಿಸಿ, ರಾಜ್ಯದಲ್ಲಿ ಮತ್ತು ಹೊರ ರಾಜ್ಯದ ವಿವಿಧೆಡೆಗಳಲ್ಲಿ ಪತ್ತೆಗೆ ಪ್ರಯತ್ನಿಸಲಾಗಿತ್ತು. ಇದಕ್ಕೆ ಒಟ್ಟು 82 ಜನ ಅಧಿಕಾರಿ ಮತ್ತು ಸಿಬ್ಬಂದಿ ತನಿಖಾ ತಂಡ ಹಗಲು ರಾತ್ರಿ ಕರ್ತವ್ಯ ನಿರ್ವಹಿಸಿ, ಸ್ಪಷ್ಟ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ ಅಂತಿಮವಾಗಿ ಆರೋಪಿಗಳನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿತ್ತು.
ಅಲ್ಲದೇ ಈ ಕೋಮು ಸೂಕ್ಷ್ಮ ಪ್ರಕರಣದ ಹಿನ್ನೆಲೆಯಲ್ಲಿ ಪುತ್ತೂರು, ಸುಳ್ಯ ಸೇರಿದಂತೆ ಹಲವು ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ನೆರೆದಿದ್ದು, ಇದನ್ನೂ ಹತೋಟಿಗೆ ತಂದು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿಯೂ ಪೊಲೀಸರು ಯಶಸ್ವಿಯಾಗಿದ್ದರು. ಇದಕ್ಕೆ ಶ್ರಮಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಕ್ತ ಬಹುಮಾನ ನೀಡಲಾಯಿತು.
ಈ ವೇಳೆ ಮಾತನಾಡಿದ ಪೊಲೀಸ್ ಮಹಾನಿರೀಕ್ಷಕರು, ಇದು ಯಾವುದೇ ಓರ್ವ ಅಧಿಕಾರಿ ಅಥವಾ ಸಿಬ್ಬಂದಿಯ ವೈಯಕ್ತಿಕ ಕೆಲಸವಾಗಿರದೇ, ಎಲ್ಲಾ 82 ಜನ ಅಧಿಕಾರಿ ಮತ್ತು ಸಿಬ್ಬಂದಿಯ ಸತತ ಪರಿಶ್ರಮದಿಂದ ಈ ಸೂಕ್ಷ್ಮ ಪ್ರಕರಣವನ್ನು ಶೀಘ್ರ ಪತ್ತೆ ಹಚ್ಚಿ ಬಗೆಹರಿಸಲಾಯಿತು ಎಂದು ತನಿಖಾ ತಂಡವನ್ನು ಪ್ರಶಂಸಿದರು. ಮುಂದಿನ ದಿನಗಳಲ್ಲಿ ಯಾವುದೇ ಸನ್ನಿವೇಶದಲ್ಲಿ ಉತ್ತಮ ತಂಡವಾಗಿ ಕರ್ತವ್ಯ ನಿರ್ವಹಿಸಿ, ಇದೇ ರೀತಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಗೌರವ ಕಾಪಾಡಿಕೊಳ್ಳುವಂತೆ ಶುಭ ಹಾರೈಸಿದರು.
ಇದನ್ನೂ ಓದಿ : ಪುತ್ತೂರಿನಲ್ಲಿ ಬಿಗಿ ಬಂದೋಬಸ್ತ್: ಪೊಲೀಸರಿಂದ ಪಥಸಂಚಲನ