ದಕ್ಷಿಣಕನ್ನಡ/ತುಮಕೂರು: ಎರಡು ಜಿಲ್ಲೆಗಳಲ್ಲಿ ದುರಂತ ಘಟನೆಗಳು ಸಂಭವಿಸಿರುವುದು ಬೆಳಕಿಗೆ ಬಂದಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಾರೊಂದು ಅಪಘಾತಕ್ಕೀಡಾಗಿದ್ದು, ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ನಾಲ್ಕೈದು ಜನರು ಗಾಯಗೊಂಡಿದ್ದಾರೆ. ಇನ್ನು ತುಮಕೂರಿನಲ್ಲಿ ಅತ್ತೆ-ಸೊಸೆ ಬಟ್ಟೆ ತೊಳೆಯಲು ಹೋಗಿ ನೀರು ಪಾಲಾಗಿರುವ ಘಟನೆ ಬೆಳಕಿಗೆ ಬಂದಿದೆ.
ಲೈಟ್ ಕಂಬಗಳಿಗೆ ಗುದ್ದಿ 50 ಅಡಿ ಆಳಕ್ಕೆ ಬಿದ್ದ ಕಾರು: ಪುತ್ತೂರಿನ ಸಂಟ್ಯಾರು ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಫೆಬ್ರುವರಿ 14 ರಂದು ರಾತ್ರಿ ನಡೆದಿದೆ. ನಿಡ್ಪಳ್ಳಿ ನಿವಾಸಿ ದಿವಂಗತ ಶ್ರೀಧರ ಭಟ್ ಎಂಬವರ ಪುತ್ರ ಮುರಳಿ ಕೃಷ್ಣ ಭಟ್ ( 35) ಮೃತಪಟ್ಟವರು ಎಂದು ಗುರತಿಸಲಾಗಿದೆ. ಇವರು ನಿಡ್ಪಳ್ಳಿ ಬಜರಂಗದಳದ ಮಾಜಿ ಸಂಚಾಲಕ ಹಾಗೂ ವಿಹಿಂಪ ಅಧ್ಯಕ್ಷರಾಗಿದ್ದರು.
ಸಂಟ್ಯಾರು - ಬೆಟ್ಟಂಪಾಡಿ ರಸ್ತೆಯ ಸಂಟ್ಯಾರು ಸಮೀಪದ ಬಳಕ್ಕ ಎಂಬಲ್ಲಿ ಕಾರು ಅಪಘಾತ ಸಂಭವಿಸಿದ್ದು, ಎರಡು ವಿದ್ಯುತ್ ಕಂಬಕ್ಕೆ ಗುದ್ದಿದ ಕಾರು 50 ಅಡಿ ಆಳದ ತೋಟಕ್ಕೆ ಬಿದ್ದಿದೆ. KA21 P 5049 ನೋಂದಣಿಯ ಫಾರ್ಡ್ ಫೀಗೋ ಕಾರು ಬೆಟ್ಟಂಪಾಡಿ ಕಡೆ ಪ್ರಯಾಣಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಮುರಳಿ ಕೃಷ್ಣ ಮೃತಪಟ್ಟಿದ್ದಾರೆ. ಕಾರಲ್ಲಿದ್ದವರನ್ನು ಬೆಟ್ಟಂಪಾಡಿಯ ದಿಲೀಪ್ ಕುಮಾರ್, ಶಶಿಕುಮಾರ್, ನವನೀತ್ ಹಾಗೂ ಮುರಳಿ ಮುಂಡೂರು ಎಂಬುವವರಿಗೆ ಗಾಯಗಳಾಗಿದ್ದು, ಕೂಡಲೇ ಸ್ಥಳೀಯರು ಗಾಯಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದರು. ಅಪಘಾತ ಸಂಭವಿಸಿದ ಕೂಡಲೇ ಗಾಯಾಳುವೊಬ್ಬ ತನ್ನ ಮನೆಗೆ ಹೋಗಿದ್ದಾನೆ ಎಂದು ತಿಳಿದುಬಂದಿದೆ. ಪುತ್ತೂರು ಡಿವೈಎಸ್ಪಿ ವೀರಯ್ಯ ಹಿರೇಮಠ್ ಅಪಘಾತದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ.
ತುಮಕೂರಿನಲ್ಲಿ ಅತ್ತೆ-ಸೊಸೆ ಸಾವು!: ತುಮಕೂರು ಜಿಲ್ಲೆಯಲ್ಲಿ ದುರಂತ ಘಟನೆಯೊಂದು ಸಂಭವಿಸಿದೆ. ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಅತ್ತೆ ಮತ್ತು ಸೊಸೆ ಇಬ್ಬರು ನೀರುಪಾಲಾಗಿರುವ ಘಟನೆ ನಿನ್ನೆ ನಡೆದಿದೆ. ಇನ್ನು ಈ ಘಟನೆ ಜಿಲ್ಲೆಯ ತಿಪಟೂರಿನ ಟಿಎಂ ಮಂಜುನಾಥ ನಗರದಲ್ಲಿ ನಡೆದಿದೆ.
ಮೃತರನ್ನು ರಾಜಣ್ಣನವರ ಪತ್ನಿ ಅನಸೂಯಮ್ಮ 50 ವರ್ಷದ ಮಹಿಳೆ ಮತ್ತು ರಘು ಅವರ ಪತ್ನಿ ಚಂದ್ರಿಕಾ 25 ವರ್ಷದ ಮಹಿಳೆ ಎಂದು ಗುರತಿಸಲಾಗಿದೆ. ಟಿಎಂ ಮಂಜುನಾಥ ನಗರದ ಹಿಂಭಾಗದ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಅತ್ತೆ ಮತ್ತು ಸೊಸೆ ಬಟ್ಟೆ ತೊಳೆಯಲು ಕೆರೆಗೆ ಹೋಗಿ ಬಹಳ ಸಮಯ ಕಳೆದ್ರೂ ಸಹ ಬಾರದ ಹಿನ್ನೆಲೆ ಸಂಬಂಧಿಕರು ಗಾಬರಿಗೊಂಡಿದ್ದರು. ಕೂಡಲೇ ಕೆರೆ ಬಳಿ ದೌಡಾಯಿಸಿದಾಗ ಬಟ್ಟೆಗಳು ಕಂಡಿವೆ. ಇದರಿಂದ ಮತ್ತಷ್ಟು ಗಾಬರಿಗೊಂಡ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಿರು. ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯಚರಣೆ ನಡೆಸಿ ಇಬ್ಬರ ಮೃತ ದೇಹಗಳನ್ನು ಹೊರ ತೆಗೆದರು. ಈ ವೇಳೆ ಮೃತಪಟ್ಟ ಸಂಬಂಧಿಕರ ರೋದನೆ ಮುಗಿಲು ಮುಟ್ಟಿತ್ತು. ತಿಪಟೂರಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಓದಿ: ಸಮರ್ಪಕವಾಗಿ ಸಮವಸ್ತ್ರ ನೀಡದ ಸರ್ಕಾರ: ಹಿರಿಯ ಅಧಿಕಾರಿಯೊಬ್ಬರನ್ನು ಜೈಲಿಗೆ ಕಳುಹಿಸುವುದಾಗಿ ಹೈಕೋರ್ಟ್ ಎಚ್ಚರಿಕೆ