ಮಂಗಳೂರು: ನಗರದ ಬಜ್ಪೆಯಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿಯ ವಿರುದ್ಧ ಯುಎಪಿಎ ಕಾಯ್ದೆಯಡಿ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ವಸಂತ ಕೃಷ್ಣ ಶೇರಿಗಾರ್ (33) ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಮುದ್ರಾಡಿ ನಿವಾಸಿಯಾಗಿದ್ದಾನೆ. ಆ.12 ರಂದು ಮಧ್ಯಾಹ್ನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾಜಿ ನಿರ್ದೇಶಕರಿಗೆ ಕರೆ ಮಾಡಿ ಬಾಂಬ್ ಇರಿಸಿದ್ದಾಗಿ ಬೆದರಿಕೆಯೊಡ್ಡಿದ್ದಾನೆ.
ಸಿಐಎಸ್ಎಫ್ ತನಿಖೆಯಿಂದ ಇದು ಹುಸಿ ಕರೆ ಎಂದು ತಿಳಿದು ಬಂದಿತ್ತು. ನಿನ್ನೆ ರಾತ್ರಿಯೇ ಆರೋಪಿಯನ್ನು ಬಂಧಿಸಿರುವ ಪೊಲೀಸರು ಇಂದು ಕೊರೊನಾ ಪರೀಕ್ಷೆಗಾಗಿ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದು, ಸೋಂಕು ಪರೀಕ್ಷೆ ಬಳಿಕ ವರದಿ ನೆಗೆಟಿವ್ ಬಂದರೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಬಳಿಕ ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲು ನ್ಯಾಯಾಲಯಕ್ಕೆ ಮನವಿ ಮಾಡಲಾಗುವುದು ಎಂದು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ತಿಳಿಸಿದ್ದಾರೆ.