ಮಂಗಳೂರು : ರೈತರ ಪರ ಹೋರಾಟ ಮಾಡುತ್ತೇವೆ ಎಂದು ಹೇಳುತ್ತಾರೆ. ಗೋವು ರೈತರ ಪರವಾಗಿರುವಂಥದ್ದು, ಗೋವಿಲ್ಲದೆ ರೈತನಿಲ್ಲ. ಕೃಷಿಯಲ್ಲಿ ನಷ್ಟವಾದ್ರೂ ಹೈನುಗಾರಿಕೆಯಲ್ಲಿ ನಷ್ಟ ಸಂಭವಿಸಿಲ್ಲ. ಆದ್ದರಿಂದ ರೈತರ ಪರವಾಗಿಯಾದ್ರೂ ಗೋಹತ್ಯೆ ನಿಷೇಧ ವಿಧೇಯಕಕ್ಕೆ ಬೆಂಬಲ ಸೂಚಿಸಬೇಕು. ಇವರು ರೈತರ ಬದುಕಿನಲ್ಲಿ ಚೆಲ್ಲಾಟವಾಡಿಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ವಿಧಾನಸಭೆ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರಗೊಂಡ ಹಿನ್ನೆಲೆ ನಗರದ ಕೊಡಿಯಾಲ್ ಬೈಲ್ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಗೋವಿಗೆ ಪೂಜೆ ಮಾಡಿ ಗ್ರೋಗ್ರಾಸ ನೀಡಿ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಚುನಾವಣೆ ಸಂದರ್ಭ ಮತಬೇಟೆಗಾಗಿ ಬಹಳಷ್ಟು ಜನರು ತುಷ್ಟೀಕರಣದ ನೀತಿ ಅನುಸರಿಸಿದ್ದು, ಕಾಂಗ್ರೆಸ್ ತುಷ್ಟೀಕರಣ ನೀತಿಯಡಿಯಲ್ಲಿ ಗೋಹತ್ಯೆ ನಿಷೇಧ ವಿಧೇಯಕಕ್ಕೆ ವಿರೋಧ ತಂದಿದೆ.
ಗೋಹತ್ಯಾಕಾರರ ಪರವಾಗಿರುವ ಅವರು ಗೋಹತ್ಯಾ ನಿಷೇಧ ಕಾನೂನನ್ನು ವಿರೋಧಿಸುತ್ತಿರುವುದು ನಮಗೆ ಖೇದವಾಗಿಲ್ಲ. ಹಿಂದೆ ಮನೆಮನೆಗಳಲ್ಲಿ ಗೋಹತ್ಯೆಗಳಾದಾಗ ಸಿದ್ದರಾಮಯ್ಯ ಸರ್ಕಾರ ಅವರನ್ನು ಬಂಧಿಸುವ ಕಾರ್ಯ ಮಾಡಿಲ್ಲ. ಆದ್ದರಿಂದ ಅವರು ಈ ಕಾನೂನಿಗೆ ಬೆಂಬಲ ಸೂಚಿಸುವರೆಂಬ ನಂಬಿಕೆ ಇರಲಿಲ್ಲ ಎಂದು ಹೇಳಿದರು.
ಗೋಹತ್ಯೆ ನಿಷೇಧ ವಿಧೇಯಕ ಬರುತ್ತದೆ ಎಂದು ಮೊನ್ನೆಯಿಂದ ಹೇಳಲಾಗುತ್ತದೆ. ಆದರೆ, ರಾಜಕಾರಣ ಮಾಡಲು ಕಾಂಗ್ರೆಸ್ನವರು ಪ್ರತಿಪಕ್ಷವನ್ನು ಬಿಜೆಪಿ ಕಡೆಗಣಿಸಿದೆ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ನವರು ಎಷ್ಟು ಕಾನೂನುಗಳನ್ನು ಚರ್ಚೆ ಮಾಡದೆ ಜಾರಿಗೆ ತಂದಿದ್ದಾರೆ.
ಎಷ್ಟೊಂದು ಗಲಭೆಗಳು ಸೃಷ್ಟಿಸಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಒಂದು ಗಂಟೆಯಲ್ಲಿ ಕ್ಯಾಬಿನೆಟ್ ಇಲ್ಲದೆ ಹಿಂಪಡೆದಿದ್ದ ಗೋಹತ್ಯೆ ಕಾನೂನನ್ನು ಯಡಿಯೂರಪ್ಪ ಮತ್ತೆ ವಾಪಸ್ ತಂದಿದ್ದಾರೆ ಎಂದರು. ರೈತರು ಎಲ್ಲಿಯೂ ಹೋರಾಟ ಮಾಡುತ್ತಿಲ್ಲ.
ರೈತರ ಹೆಸರು ಹೇಳಿ ಬದುಕುವ ರಾಜಕಾರಣಿಗಳು ಹೋರಾಟ ಮಾಡುತ್ತಿದ್ದಾರೆ. ಪ್ರಧಾನಿ ಮೋದಿಯವರು ರೈತರನ್ನು ಕರೆದು ಈಗಾಗಲೇ ಮಾತನಾಡಿದ್ದಾರೆ. ರೈತರಿಗೆ ಯಾವುದೇ ರೀತಿಯ ಅನ್ಯಾಯಗಳಾಗದ ಹಾಗೆ ಕೇಂದ್ರ ಸರ್ಕಾರ ನೋಡುತ್ತದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಇದನ್ನು ಓದಿ: ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರ: ಬಿಜೆಪಿ ಕಚೇರಿಗಳಲ್ಲಿ ಗೋಪೂಜೆ ಮೂಲಕ ಸ್ವಾಗತ
ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ವಿಶೇಷ ಪ್ರಾಧಾನ್ಯತೆ ಇದೆ. ಹುಟ್ಟಿನಿಂದ ಸಾಯುವವರೆಗೂ ಗೋವು ಮನುಷ್ಯನೊಂದಿಗೆ ಸಂಬಂಧ ಇರಿಸಿಕೊಳ್ಳುತ್ತದೆ. ಆದ್ದರಿಂದ ಮಾತೃಋಣದಷ್ಟೇ ಗೋವು ಋಣವೂ ಪವಿತ್ರವಾಗಿರುತ್ತದೆ. ಜನರ ನಂಬಿಕೆ ಹಾಗೂ ಜೀವನಾಧಾರವಾಗಿರುವ ಗೋವಿನ ಹತ್ಯೆ ಮಾಡಬಾರದೆಂದು ಬಹಳಷ್ಟು ಕಾಲದಿಂದ ಬೇಡಿಕೆ ಇದೆ.
ಸರ್ವೇ ಪ್ರಕಾರ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಒಂದು ಮನೆಗೆ ಐದು ಗೋವುಗಳಿದ್ದವು. ಇಂದು ಐವತ್ತು ಮನೆಗೆ ಒಂದು ಗೋವು ಇಲ್ಲ. ಆದ್ದರಿಂದ ಗೋಹತ್ಯೆ ನಿಷೇಧ ಕಾನೂನು ಜಾರಿಯಾಗಬೇಕು ಎನ್ನುವುದು ಬಹಳಷ್ಟು ಜನರ ಬೇಡಿಕೆ ಇತ್ತು.
ಸ್ವಾತಂತ್ರ್ಯ ಬಳಿಕ ಈ ತರಹದ ಕಾನೂನುಗಳು ಜಾರಿಯಾಗಿದ್ದವು. ಆದರೆ, ಕಠಿಣವಾದ ಕಾನೂನುಗಳು ಬಂದಿರಲಿಲ್ಲ. ಬಿಜೆಪಿ ಸರ್ಕಾರ ಬಂದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದ್ದರಿಂದ ಕಾನೂನು ಜಾರಿಗೆ ತಂದ ಸಿಎಂ ಯಡಿಯೂರಪ್ಪ ಹಾಗೂ ಪಶು ವೈದ್ಯಕೀಯ ಸಚಿವ ಪ್ರಭು ಚೌಹಾಣ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.