ಮಂಗಳೂರು: ಮಂಗಳೂರಿಗೆ ಮೂರನೇ ಐಷಾರಾಮಿ ಪ್ರಯಾಣಿಕ ಹಡಗು ಇಂದು ಬೆಳಗ್ಗೆ ಆಗಮಿಸಿದೆ. ಇದರಲ್ಲಿದ್ದ ಪ್ರಯಾಣಿಕರು ಮಂಗಳೂರು ದರ್ಶನ ಮಾಡಿದರು. ಪಣಂಬೂರು ನವ ಮಂಗಳೂರು ಬಂದರಿಗೆ 'MS NAUTICA' ಆಗಮಿಸಿತು. ಮಸ್ಕತ್‌ನಿಂದ ಆಗಮಿಸಿದ ಈ ಹಡಗಿನಲ್ಲಿ 548 ಪ್ರಯಾಣಿಕರು ಮತ್ತು 397 ಸಿಬ್ಬಂದಿಗಳಿದ್ದರು.
ಪ್ರಯಾಣಿಕರು ಸ್ಥಳೀಯ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಲು 2 ಬಸ್ ಸೇರಿದಂತೆ 18 ಕೋಚ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಕ್ರೂಸ್ ಪ್ರಯಾಣಿಕರಿಗೆ ಕ್ರೂಸ್ ಲಾಂಜ್‌ನೊಳಗೆ ಆಯುಷ್ ಇಲಾಖೆಯ ವತಿಯಿಂದ ಧ್ಯಾನ ಕೇಂದ್ರದ ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರವಾಸಿಗರಿಗಾಗಿ ಬಟ್ಟೆ ಮತ್ತು ಕರಕುಶಲ ಮಳಿಗೆಗಳನ್ನು ತೆರೆಯಲಾಗಿತ್ತು.
ವಿದೇಶಿ ಪ್ರಯಾಣಿಕರು ಮಂಗಳೂರು ಮತ್ತು ಸುತ್ತಮುತ್ತಲಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ, ಸ್ಥಳೀಯ ಮಾರುಕಟ್ಟೆ, ಮೂಡಬಿದಿರೆಯ ಸಾವಿರ ಕಂಬದ ಬಸದಿ, ಕಾರ್ಕಳ ಗೋಮಟೇಶ್ವರ ಪ್ರತಿಮೆ, ಸೋನ್ಸ್ ಫಾರ್ಮ್, ಸೈಂಟ್ ಅಲೋಶಿಯಸ್ ಚಾಪೆಲ್ ಹಾಗೂ ಅಚಲ್ ಗೋಡಂಬಿ ಕಾರ್ಖಾನೆಗಳಿಗೆ ಭೇಟಿ ನೀಡಿದರು. ಸಂಜೆ 5 ಕ್ಕೆ ಹಡಗು ಕೊಚ್ಚಿನ್‌ಗೆ ಪ್ರಯಾಣ ಬೆಳೆಸಿತು.
ಈ ಹಡಗು ಮಾಲೆ (ಮಾಲ್ಡೀವ್ಸ್)ಗೆ ಹೋಗುವ ದಾರಿಯಲ್ಲಿ ಭಾರತಕ್ಕೆ ಬಂದಿದೆ. ಈ ಹಿಂದೆ ಮುಂಬೈ ಹಾಗೂ ಮರ್ಮಾಗೋವಾ ಬಂದರಿನಲ್ಲಿ ಲಂಗರು ಹಾಕಿತ್ತು.
ಇದನ್ನೂ ಓದಿ: ವಾರದ ಅಂತರದಲ್ಲಿ ನವ ಮಂಗಳೂರು ಬಂದರಿಗೆ ಬಂತು ಎರಡನೇ ಐಷಾರಾಮಿ ಹಡಗು