ಮಂಗಳೂರು: ರಾಜ್ಯ ಸರ್ಕಾರದ ಹೊಸ ಗೈಡ್ ಲೈನ್ಸ್ ಪ್ರಕಾರ ಹೊರ ರಾಜ್ಯಗಳಿಂದ, ಹೊರದೇಶಗಳಿಂದ ಬರುವವರಿಗೆ ಏಳು ದಿನಗಳ ಕ್ವಾರೆಂಟೈನ್ ನಡೆಸಿ, ಸೋಂಕಿನ ಲಕ್ಷಣ ಇದ್ದಲ್ಲಿ ಮಾತ್ರ ಟೆಸ್ಟ್ ಮಾಡಲಾಗುತ್ತದೆ. ಇಲ್ಲದಿದ್ದಲ್ಲಿ ಮನೆಗೆ ಕಳುಹಿಸಲಾಗುವುದು. ಇದು ಭವಿಷ್ಯದ ದಿನಗಳಲ್ಲಿ ದೊಡ್ಡ ಮಟ್ಟದ ಗಂಡಾಂತರ ಸೃಷ್ಟಿಸಲಿದೆ. ಈ ಮೂಲಕ ಸರ್ಕಾರ ಮನೆ ಮನೆಗೆ ಕೊರೊನಾ ಸೋಂಕು ತಲುಪಿಸುವ ಯೋಜನೆ ರೂಪಿಸುತ್ತಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಮಾತನಾಡಿದ ಅವರು, ಹಿಂದೆ ಹೊರರಾಜ್ಯ, ಹೊರಜಿಲ್ಲೆ, ಹೊರದೇಶಗಳಿಂದ ಬರುವವರಿಗೆ 28 ದಿನಗಳ ಕ್ವಾರೆಂಟೈನ್, 14 ದಿನಗಳ ಕ್ವಾರೆಂಟೈನ್, 5 ದಿನ ಆದ ಬಳಿಕ ಟೆಸ್ಟ್, 12 ದಿವಸಗಳ ಬಳಿಕ ಟೆಸ್ಟ್ ನಡೆಸಿ ನೆಗೆಟಿವ್ ಬಂದಲ್ಲಿ ಮನೆಗೆ ಕಳುಹಿಸಲಾಗುತ್ತಿತ್ತು. ಆದರೆ, ಇದೀಗ ಲಾಕ್ ಡೌನ್ ಸಡಿಲಿಕೆ ಆಗಿರೋದರಿಂದ ಹೆಚ್ಚಿನ ರೀತಿಯಲ್ಲಿ ತಪಾಸಣೆ ನಡೆಸಬೇಕಿತ್ತು ಎಂದು ಹೇಳಿದರು.
ಹೊರರಾಜ್ಯ, ಹೊರದೇಶಗಳಲ್ಲಿ ಇರುವವರು ಖಂಡಿತಾ ಬರಬೇಕು. ಲಾಕ್ಡೌನ್ ಮಾಡಿ ಅವರನ್ನು ಬರದಂತೆ ಸಂಕಷ್ಟಕ್ಕೆ ಸಿಲುಕಿಸಿ, ಈಗ ಕೊರೊನಾ ಬರುತ್ತದೆ ಎಂದು ಅವರನ್ನು ಇತ್ತ ಬರದಂತೆ ತಡೆಯುತ್ತಿದೆ. ಇದು ಮಾನವೀಯತೆಯ ನಡೆಯಲ್ಲ. ಆದ್ದರಿಂದ ವಿದೇಶದಲ್ಲಿರುವವರಿಗೂ, ಹೊರ ರಾಜ್ಯದಲ್ಲಿರುವವರಿಗೂ ಸರ್ಕಾರ ತಕ್ಷಣ ವ್ಯವಸ್ಥೆ ಮಾಡಲಿ. ಕೊರೊನಾದ ಜೊತೆಯಲ್ಲಿ ಬದುಕಿ ಎಂದು ಹೇಳುತ್ತಾ ಕೊನೆಗೆ ಸಾಯುವ ಪರಿಸ್ಥಿತಿಯನ್ನು ಸರ್ಕಾರ ಸೃಷ್ಟಿಸುತ್ತಿದೆ ಎಂದು ಹೇಳಿದರು.
ಮಂಗಳೂರಿನಲ್ಲಿಯೂ ತಪಾಸಣೆ ನಡೆಸಿದ ವರದಿ ಬಾರದೇ ವ್ಯಕ್ತಿಯೊಬ್ಬನನ್ನು ಮನೆಗೆ ಕಳುಹಿಸಲಾಗಿದೆ. ಬಳಿಕ ಆತನನ್ನು ಸೋಂಕು ದೃಢಗೊಂಡಿದೆ ಎಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ರೀತಿ, ಆದಲ್ಲಿ ಸರ್ಕಾರ ಯಾವ ರೀತಿಯಲ್ಲಿ ಸಮಸ್ಯೆಯನ್ನು ನಿಭಾಯಿಸುತ್ತದೆ. ಈ ಮೂಲಕ ಸರ್ಕಾರವೇ ಕೊರೊನಾ ಸೋಂಕನ್ನು ಮನೆಮನೆಗೆ ಕಳುಹಿಸುತ್ತಿದೆ. ಈ ಬಗ್ಗೆ ರಾಜ್ಯ ಸರ್ಕಾರ ಮರುಪರಿಶೀಲನೆ ನಡೆಸಲಿ ಎಂದು ಖಾದರ್ ಒತ್ತಾಯಿಸಿದರು.
ನರ್ಸರಿ ಮಕ್ಕಳಿಂದ ಹಿಡಿದು ಪದವಿವರೆಗಿನ ಮಕ್ಕಳು ಕೂಡ ಭವಿಷ್ಯದ ದೃಷ್ಟಿಯಿಂದ ಚಿಂತೆಯಲ್ಲಿದ್ದಾರೆ. ಪೋಷಕರು, ಶಾಲಾ ಮ್ಯಾನೇಜ್ ಮೆಂಟ್, ಶಿಕ್ಷಕರು, ವ್ಯಾಪಾರಸ್ಥರು, ಉದ್ದಿಮೆದಾರರು ಕೊರೊನಾದ ಜೊತೆಯಲ್ಲಿ ಭವಿಷ್ಯದ ಬಗ್ಗೆ ಚಿಂತೆಯಲ್ಲಿದ್ದಾರೆ. ಇದಕ್ಕೆ ಎಲ್ಲ ಜನಪ್ರತಿನಿಧಿಗಳು ತಂಡವಾಗಿ ಕೆಲಸ ಮಾಡದಿದ್ದಲ್ಲಿ ಸಮಸ್ಯೆ ಬಗೆಹರಿಯಲು ಸಾಧ್ಯವಿಲ್ಲ. ಆರೋಗ್ಯದ ಕುರಿತು ಶ್ರೀ ರಾಮುಲು, ವೈದ್ಯಕೀಯ ಶಿಕ್ಷಣದ ಬಗ್ಗೆ ಸುಧಾಕರ್, ಶಿಕ್ಷಣದ ಬಗ್ಗೆ ಸುರೇಶ್ ಕುಮಾರ್ ಮಾತನಾಡಬೇಕು ಎಂದು ಗರಂ ಆದರು.