ಮಂಗಳೂರು: ರಾಜ್ಯ ಸರ್ಕಾರವು ಬಿಲ್ಲವ, ಈಡಿಗ ಸೇರಿದಂತೆ 26 ಪಂಗಡಗಳ ಸರ್ವತೋಮುಖ ಅಭಿವೃದ್ಧಿಗೆ ಸೋಮವಾರ ಘೋಷಿಸಿರುವ ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮವು ಬಲವಿಲ್ಲದ ನಿಗಮ ಎಂದು ಬಿಲ್ಲವ ಮುಖಂಡರು ಆಕ್ಷೇಪಿಸಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಶ್ರೀಕ್ಷೇತ್ರ ಕುದ್ರೋಳಿಯ ಕೋಶಾಧಿಕಾರಿ ಪದ್ಮರಾಜ್ ಆರ್., ಕನಿಷ್ಠ ಪಕ್ಷ 500 ಕೋಟಿ ರೂ. ಹಣ ಮೀಸಲಿಟ್ಟು ಶ್ರೀ ನಾರಾಯಣ ಗುರು ಅಭಿವೃದ್ದಿ ನಿಗಮ ಘೋಷಣೆ ಮಾಡಬೇಕೆಂದು ಸಮುದಾಯವು ಕಳೆದ 4 ವರ್ಷಗಳಿಂದ ಹೋರಾಟ ಮಾಡುತ್ತಿದೆ. ಆದರೆ ಸರ್ಕಾರ ಇಂತಿಷ್ಟು ಹಣ ಮೀಸಲಿಟ್ಟು, ಸಮಿತಿಯನ್ನೂ ರಚನೆ ಮಾಡದೆ ನಿಗಮವನ್ನು ತರಾತುರಿಯಲ್ಲಿ ಘೋಷಣೆ ಮಾಡಿದೆ. ನಿಗಮ ಸ್ಥಾಪನೆಯ ಪ್ರಕ್ರಿಯೆ ಪೂರ್ಣಗೊಂಡು ಸಮುದಾಯಕ್ಕೆ ನಿಗಮದ ಲಾಭ ಕೈ ಸೇರಲು ಕನಿಷ್ಠ ಮೂರು ತಿಂಗಳಾದರೂ ಬೇಕಾಗುತ್ತದೆ. ಆದ್ದರಿಂದ ಈ ಸರ್ಕಾರದ ಅವಧಿಯಲ್ಲಿ ಹೊಸದಾಗಿ ಆದೇಶವಾದ ನಾರಾಯಣ ಗುರು ಅಭಿವೃದ್ದಿ ನಿಗಮದಿಂದ ಸಮುದಾಯಕ್ಕೆ ಯಾವುದೇ ಪ್ರಯೋಜನವಿಲ್ಲ ಎಂದರು.
ನಾನು ಯಾವುದೇ ಪಕ್ಷದಲ್ಲಿ ಈವರೆಗೆ ಗುರುತಿಸಿಕೊಂಡಿಲ್ಲ. ಟಿಕೆಟ್ಗಾಗಿ ಅರ್ಜಿಯನ್ನು ಹಾಕಿಲ್ಲ. ಯಾವುದೇ ರಾಜಕೀಯ ಸಭೆ ಸಮಾರಂಭಗಳಲ್ಲಿಯೂ ಮಾತನಾಡಿಲ್ಲ. ಆದರೆ ತಾನು ಚುನಾವಣೆಗೆ ಸ್ಪರ್ಧಿಸಬೇಕೆಂಬ ಒತ್ತಾಯ ಸಮಾಜ ಬಾಂಧವರಿಂದ, ಜನಸಾಮಾನ್ಯರಿಂದ ಕೇಳಿ ಬರುತ್ತಿದೆ. ನನ್ನ ಪ್ರಥಮ ಆದ್ಯತೆ ಸಮಾಜಸೇವೆಯೇ ಹೊರತು ರಾಜಕೀಯವಲ್ಲ ಎಂದು ಹೇಳಿದರು.
ನಾರಾಯಣ ಗುರು ವಿಚಾರವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ, ನಿಗಮ ಘೋಷಣೆಯು ಸಮುದಾಯದ ಸಂಘಟಿತ ಹೋರಾಟದ ಫಲ. ಈಗಿರುವ ಸರ್ಕಾರದಿಂದ ನಿಗಮಕ್ಕೆ ನ್ಯಾಯ ದೊರಕಲು ಕಾನೂನಿನ ತೊಡಕು ಎದುರಾಗಲಿದೆ. ಮುಂದೆ ಅಧಿಕಾರಕ್ಕೆ ಬರುವ ಸರ್ಕಾರವು ನಿಗಮದ ಕಾರ್ಯವನ್ನು ಮುಂದುವರಿಸಲು ಸುಲಭವಾಗಲಿದೆ.
ಅಲ್ಲದೇ ಮುಂದೆ ಯಾವುದೇ ಸರ್ಕಾರ ಬಂದರೂ ಈ ನಿಗಮವನ್ನು ರದ್ದು ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಿಗಮ ಸ್ಥಾಪನೆಯ ಹೆಜ್ಜೆ ಮಹತ್ವಪೂರ್ಣದ್ದಾಗಿದೆ. ಪೂರ್ಣ ಪ್ರಮಾಣದ ನಿಗಮವಾಗಿ ಹಣಕಾಸಿನ ಬಿಡುಗಡೆ ಆಗುವವರೆಗೆ ಈಗಿರುವ ದೇವರಾಜು ಅರಸು ನಿಗಮದಿಂದ ಸಮುದಾಯಕ್ಕೆ ಯಾವುದೇ ರೀತಿಯ ಪ್ರಯೋಜನವೂ ದೊರಕುವುದಿಲ್ಲ. ಆದ್ದರಿಂದ ಸರಕಾರ ನಾರಾಯಣ ಗುರು ಅಭಿವೃದ್ಧಿ ನಿಗಮದ ಮುಂದಿನ ಪ್ರಕ್ರಿಯೆಗೆ ತಕ್ಷಣ ಚಾಲನೆಯನ್ನು ನೀಡಬೇಕು. ಶೀಘ್ರದಲ್ಲೇ ನಿಗಮಕ್ಕೆ ಹಣಕಾಸು ಮೀಸಲಿಟ್ಟು, ಸಮಿತಿ ರಚಿಸಬೇಕೆಂದು ಆಗ್ರಹಿಸಿದರು.
ನನಗೆ ಚುನಾವಣಾ ಕಣಕ್ಕಿಳಿಯಲು ಪಕ್ಷದಿಂದ ಸೀಟು ಕೊಡಲಾಗುತ್ತದೆ ಎಂಬ ಕರೆ ಈ ಹೊತ್ತಿನವರೆಗೆ ಬಂದಿಲ್ಲ. ವೈಯುಕ್ತಿಕವಾಗಿ ಚುನಾವಣೆಯ ಬಗ್ಗೆ ತನಗೆ ಯಾವುದೇ ಆಸಕ್ತಿಯಿಲ್ಲ. ಸಮಾಜ ಸೇವೆಯನ್ನು ಮಾಡಿಕೊಂಡು ಓಡಾಡುತ್ತಿದ್ದೇನೆ. ಕಳೆದ ಒಂದು ವರ್ಷದಿಂದ ನಾನು ನಡೆಸಿರುವ ಪತ್ರಿಕಾಗೋಷ್ಠಿಯ ಹೇಳಿಕೆ, ಸಾರ್ವಜನಿಕ ಭಾಷಣಗಳನ್ನು ಕೇಳಿದರೆ, ನಾನು ಯಾವ ಪಕ್ಷದಲ್ಲಿ ಗುರುತಿಸಿದ್ದೇನೆಯೋ ಅವರು ಟಿಕೆಟ್ ಕೊಡುವುದು ಕಷ್ಟ ಸಾಧ್ಯ. ಪಕ್ಷ ಸೀಟು ಕೊಡುತ್ತದೆ ಎಂಬ ಯಾವುದೇ ಮುಲಾಜಿಗೊಳಗಾಗಿ ನಾನು ಹೇಳಿಕೆಯನ್ನು ನೀಡುತ್ತಿಲ್ಲ. ಪಕ್ಷವೇ ಚುನಾವಣೆ ಎದುರಿಸಲು ಟಿಕೆಟ್ ಕೊಟ್ಟಲ್ಲಿ ಸಮಾಜದೊಂದಿಗೆ ಚರ್ಚಿಸಿ ಅವರು ಒಪ್ಪಿಗೆ ಕೊಟ್ಟಲ್ಲಿ ಚುನಾವಣೆಯನ್ನು ಎದುರಿಸುವೆ ಎಂದು ತಿಳಿಸಿದರು.
ಇದನ್ನೂ ಓದಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ 91 ಲಕ್ಷ ಮೌಲ್ಯದ ಚಿನ್ನ ಮತ್ತು ವಿದೇಶಿ ಕರೆನ್ಸಿ ವಶ