ಮಂಗಳೂರು: ರಾಹುಗ್ರಸ್ತ ಚೂಡಾಮಣಿ ಸೂರ್ಯಗ್ರಹಣ ಇರುವ ಕಾರಣ ನಾಳೆ ಬೆಳಗ್ಗೆ 10.04 ರಿಂದ (ಗ್ರಹಣ ಸ್ಪರ್ಶ ಕಾಲದಿಂದ) ಮಧ್ಯಾಹ್ನ 1.22 (ಗ್ರಹಣ ಮೋಕ್ಷ ಕಾಲದವರೆಗೆ) ರವರೆಗೆ ಕುದ್ರೋಳಿ ದೇವಾಲಯ ಬಂದ್ ಆಗಲಿದೆ. ಗ್ರಹಣ ಬಳಿಕ ಭಕ್ತರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಆದರೆ, ದೇವರ ದರ್ಶನ ಮಾತ್ರ ಇರಲಿದ್ದು, ಯಾವುದೇ ಸೇವೆಗೆ ಅವಕಾಶವಿಲ್ಲ.
ಈ ಬಗ್ಗೆ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಳದ ಅರ್ಚಕ ನವೀನ್ ಶಾಂತಿ ಮಾತನಾಡಿ, ನಿತ್ಯ ಪೂಜೆಯು ಸೂರ್ಯೋದಯಕ್ಕಿಂತ ಮೊದಲೇ ಆಗಲಿದ್ದು, ಬೆಳಗ್ಗೆ 10.05ರಿಂದ (ಗ್ರಹಣ ಸ್ಪರ್ಶ ಕಾಲದಿಂದ) ಮದ್ಯಾಹ್ನ 1.22( ಗ್ರಹಣ ಮೋಕ್ಷ ಕಾಲದ ವರೆಗೆ)ರವರೆಗೆ ಶ್ರೀಗೋಕರ್ಣನಾಥ ದೇವರಿಗೆ ಧಾರಾಭಿಷೇಕ, ಶಿವ ಪಂಚಾಕ್ಷರೀ ಮಂತ್ರ, ಶುದ್ಧಾಧ್ಯಯ ಪಠಣ ಮೂಲಕ ಲೋಕ ಕಲ್ಯಾರ್ಥವಾಗಿ ವಿಶೇಷ ಪ್ರಾರ್ಥನೆ ನಡೆಸಲಾಗುತ್ತದೆ. ಗ್ರಹಣ ಮೋಕ್ಷದ ಬಳಿಕ ದೇಗುಲವನ್ನು ಶುಚಿಗೊಳಿಸಿ ಪಂಚಗವ್ಯದ ಮೂಲಕ ಎಲ್ಲಾ ಪರಿವಾರ ದೇವರುಗಳಿಗೆ ಕಲಶಾಭಿಷೇಕ ನೆರವೇರಿಸಲಾಗುತ್ತದೆ. ಅಲ್ಲದೆ ದೋಷವಿರುವ ರಾಶಿಗಳಿಗಳಿಗೆ ಗ್ರಹಣ ಶಾಂತಿ ಹೋಮ ನೆರವೇರಿಸಲಾಗುತ್ತದೆ. ಶ್ರೀಗೋಕರ್ಣನಾಥ ದೇವರಿಗೆ ವಿಶೇಷ ರುದ್ರಾಭಿಷೇಕ, ಬಿಲ್ವಾರ್ಚನೆ ಮಾಡಲಾಗುತ್ತದೆ ಎಂದು ಹೇಳಿದರು.
ಮಂಗಳೂರಿನ ಇತರ ದೇವಳಗಳಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯ, ಮಂಗಳಾದೇವಿ ದೇವಾಲಯ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕದ್ರಿ ಶ್ರೀ ಮಂಜುನಾಥ ದೇವಾಲಯಗಳು ತೆರೆದಿದ್ದರೂ, ನಿತ್ಯ ಪೂಜೆಯನ್ನು ಸೂರ್ಯೋದಯಕ್ಕಿಂತಲೂ ಮೊದಲೇ ನೆರವೇರಿಸಲಾಗುತ್ತದೆ. ಗ್ರಹಣ ಮೋಕ್ಷದ ಬಳಿಕ ದೇವಾಲಯಗಳನ್ನು ಶುದ್ಧಿಗೊಳಿಸಿ ದೇವರಿಗೆ ವಿಶೇಷವಾಗಿ ಪೂಜೆ ನೆರವೇರಿಸಲಾಗುತ್ತದೆ. ಆದರೆ, ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿದ್ದು, ಯಾವುದೇ ಸೇವೆ ಮಾಡಲು ಅವಕಾಶವಿರುವುದಿಲ್ಲ.