ಮಂಗಳೂರು/ದಕ್ಷಿಣ ಕನ್ನಡ : ಅಡ್ಯಾರ್ ಸಮೀಪದ ಕಾಲೇಜು ಬಳಿ ಅಕ್ರಮ ಮರಳು ಸಾಗಾಟದ ಲಾರಿ ನಿಲ್ಲಿಸಲು ಯತ್ನಿಸಿದ ವೇಳೆ ದುಷ್ಕರ್ಮಿಗಳು ಪೊಲೀಸರ ಮೇಲೆಯೇ ಲಾರಿ ಹತ್ತಿಸಲು ಯತ್ನಿಸಿದ ಘಟನೆ ಬುಧವಾರ ನಡೆದಿದೆ. ಟಿಪ್ಪರ್ ಲಾರಿ ಚಾಲಕ ಅಬ್ದುಲ್ ಇಸಾಕ್, ಆಲ್ಟೋ ಕಾರು ಚಾಲಕ ಮೊಯಿದ್ದೀನ್ ಅಫ್ಸರ್ ಎಂಬ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಅಕ್ರಮ ಮರಳುಗಾರಿಕೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಬುಧವಾರ ಅಡ್ಯಾರ್ ಸಮೀಪದ ವಾಹನ ತಪಾಸಣೆ ನಡೆಸುತ್ತಿದ್ದರು. ಮಧ್ಯರಾತ್ರಿ 2:30ರ ಸುಮಾರಿಗೆ ಅಡ್ಯಾರ್ ಸಮೀಪದ ನೇತ್ರಾವತಿ ನದಿ ಹಾಗೂ ಮರಳು ಧಕ್ಕೆ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ-73ರ ಕಡೆಗೆ ಟಿಪ್ಪರ್ ಲಾರಿಯೊಂದು ಬರುತ್ತಿತ್ತು. ಪೊಲೀಸರು ಆ ವಾಹನವನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ.
ಇದೇ ವೇಳೆಗೆ ಟಿಪ್ಪರ್ ಲಾರಿಯ ಹಿಂಬದಿಯಿಂದ ಆಲ್ಟೋ ಕಾರೊಂದು ಬಂದಿತ್ತು. ಅದರಲ್ಲಿನ ದುಷ್ಕರ್ಮಿಗಳು ಟಿಪ್ಪರ್ ಲಾರಿಯನ್ನು ನಿಲ್ಲಿಸದಂತೆ ಚಾಲಕನಿಗೆ ತಿಳಿಸಿದರು. ಪೊಲೀಸ್ ಅಧಿಕಾರಿಗಳ ಸೂಚನೆಯನ್ನು ಧಿಕ್ಕರಿಸಿ, ಫರಂಗಿಪೇಟೆ ಕಡೆಯ ರಸ್ತೆಯಲ್ಲಿ ವಾಹನ ಚಲಾಯಿಸಿಕೊಂಡು ತೆರಳಿದ್ದಾರೆ. ಈ ವಾಹನಗಳನ್ನು ಬೆನ್ನಟ್ಟಿದರೂ ನಿಲ್ಲಿಸದೇ ವೇಗವಾಗಿ ಚಲಾಯಿಸಿಕೊಂಡು ಹೋಗಿ ತಪ್ಪಿಸಿಕೊಂಡಿದ್ದರು.
ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಅಡ್ಯಾರ್‌ನಲ್ಲಿ ಪೊಲೀಸರಿಂದ ತಪ್ಪಿಸಿಕೊಂಡು ಟಿಪ್ಪರ್ ಲಾರಿ ಹಾಗೂ ಆಲ್ಟೊ ಕಾರು ಫರಂಗಿಪೇಟೆಯತ್ತ ತೆರಳುತ್ತಿತ್ತು. ಬಂಟ್ವಾಳ ಗ್ರಾಮಾಂತರ ಪೊಲೀಸರು ಬುಧವಾರ ನಸುಕಿನಜಾವ ಫರಂಗೀಪೇಟೆ ಚೆಕ್‌ಪೋಸ್ಟ್‌ನಲ್ಲಿ ಬ್ಯಾರಿಕೇಡ್ ಹಾಕಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು.
ಈ ವೇಳೆ ಮಂಗಳೂರು ಕಡೆಯಿಂದ ಬಂದ ಟಿಪ್ಪ್ ಲಾರಿಯನ್ನು ನಿಲ್ಲಿಸಲು ಪೊಲೀಸರು ಸೂಚಿಸಿದ್ದಾರೆ. ಆದರೂ ಟಿಪ್ಪರ್ ಲಾರಿ ಚಾಲಕನು ಲಾರಿಯನ್ನು ವೇಗವಾಗಿ ಚಲಾಯಿಸಿ, ಪೊಲೀಸರ ಮೇಲೆಯೇ ವಾಹನ ಹತ್ತಿಸಲು ಯತ್ನಿಸಿದ್ದಾನೆ ಎಂದು ಪೊಲೀಸರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರ ಸಹಕಾರದೊಂದಿಗೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣದಲ್ಲಿ ಟಿಪ್ಪರ್ ಲಾರಿ, ಕಾರನ್ನು ವಶಪಡಿಸಿಕೊಳ್ಳಲಾಗಿದೆ.