ಮಂಗಳೂರು: ಯುವತಿಯರ ಸರಣಿ ಹಂತಕ ಕುಖ್ಯಾತ ಆರೋಪಿ ಸೈನೈಡ್ ಮೋಹನ್ ಕುಮಾರ್ಗೆ ಇಲ್ಲಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಮಡಿಕೇರಿಯ ಇಬ್ಬರು ಯುವತಿಯರನ್ನು ಅತ್ಯಾಚಾರ ನಡೆಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ, ಜೀವನ ಪರ್ಯಂತ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಪ್ರಕರಣದ ವಿವರ:
ಬಂಟ್ವಾಳ ತಾಲೂಕಿನ ಕೆದಿಲ ಗ್ರಾಪಂನ ಪೆರಮೊಗರುವಿನ 34 ವರ್ಷದ ಯುವತಿಯೋರ್ವಳು ಸೈನೈಡ್ ಮೋಹನ್ ಕುಮಾರ್ಗೆ ಬಿ.ಸಿ.ರೋಡ್ನ ಬಸ್ ನಿಲ್ದಾಣದಲ್ಲಿ ಪರಿಚಯವಾಗುತ್ತಾಳೆ. ಈಕೆಯನ್ನು ಮೋಹನ್ 2009 ನೇ ಮಾರ್ಚ್ 3 ರಂದು ಮದುವೆಯಾಗುತ್ತೇನೆಂದು ನಂಬಿಸಿ ಮಡಿಕೇರಿಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಲಾಡ್ಜ್ಗೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸುತ್ತಾನೆ. ಬಳಿಕ ಅದೇ ದಿನ ಮಡಿಕೇರಿಯ ಬಸ್ ನಿಲ್ದಾಣಕ್ಕೆ ಕರೆದುಕೊಂಡು ಹೋಗಿ ಗರ್ಭ ನಿರೋಧಕ ಮಾತ್ರೆ ಎಂದು ಸೈನೈಡ್ ಕೊಟ್ಟು ಕೊಲೆ ಮಾಡುತ್ತಾನೆ. ಈ ಬಗ್ಗೆ ಮಡಿಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತದೆ. ಅಲ್ಲದೆ ಟಿವಿಯಲ್ಲಿ ಈ ಬಗ್ಗೆ ವರದಿಯಾದ ಹಿನ್ನೆಲೆಯಲ್ಲಿ ಯುವತಿಯ ಮನೆಯವರು ಮೃತದೇಹದ ಗುರುತು ಪತ್ತೆ ಹಚ್ಚುತ್ತಾರೆ.
ಬಳಿಕ ಪುತ್ತೂರಿನ ಯುವತಿಯೋರ್ವಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, 2009 ಅಕ್ಟೋಬರ್ 21ರಂದು ಪೊಲೀಸರ ಬಲೆಗೆ ಬಿದ್ದ ಸೈನೈಡ್ ಮೋಹನ್ ತನಿಖಾಧಿಕಾರಿ ಶ್ರೀಕಾಂತ್ ಪುತ್ತೂರು ವಿಚಾರಣೆ ನಡೆಸಿದಾಗ ಪೆರಮೊಗರುವಿನ ಈ ಯುವತಿಯನ್ನು ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಳ್ಳುತ್ತಾನೆ. ಅಲ್ಲದೆ ಆರೋಪಿ ಲಾಡ್ಜ್ನಲ್ಲಿ ತನ್ನ ಹೆಸರನ್ನು ಆನಂದ ಎಂದು ಬದಲಾಯಿಸಿದ್ದ ಎಂಬ ಸತ್ಯ ತನಿಖೆಯಲ್ಲಿ ತಿಳಿದು ಬಂದಿದೆ. ಈ ಸಂದರ್ಭ ಸಿಒಡಿ ಚಾರ್ಜ್ ಶೀಟ್ ಸಲ್ಲಿಸಿ ಹೆಚ್ಚುವರಿ ವಿಚಾರಣೆ ನಡೆಸಿ 39 ಸಾಕ್ಷಿದಾರರು, 77 ದಾಖಲೆಗಳು ಹಾಗೂ 31 ಸಾಮಾಗ್ರಿಗಳನ್ನು ವಿಚಾರಣೆಗೆ ಪರಿಗಣಿಸಿದೆ. ಈ ಪ್ರಕರಣವನ್ನು ಕೈಗೆತ್ತಿಕೊಂಡ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆಯನ್ನು ಪ್ರಕಟಿಸಿದೆ.
ಮತ್ತೊಂದು ಪ್ರಕರಣ:
ಮಡಿಕೇರಿ ತಾಲೂಕಿನ ಇಂದಿರಾ ಆವಾಸ್ ಕಾಲನಿಯ ಯುವತಿಯನ್ನು ಪರಿಚಯಿಸಿಕೊಂಡ ಸೈನೈಡ್ ಮೋಹನ್ ತನ್ನನ್ನು ಆನಂದ್ ಎಂದು ಪರಿಚಯಿಸಿಕೊಳ್ಳುತ್ತಾನೆ. ಬಳಿಕ ಯುವತಿಯನ್ನು 2009 ಮಾರ್ಚ್ 10 ರಂದು ಸುಳ್ಯ ಬಸ್ ಸ್ಟ್ಯಾಂಡ್ ಬರಲು ತಿಳಿಸುವ ಮೋಹನ್, ಆಕೆಯನ್ನು ಮೈಸೂರಿಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ವಿನಾಯಕ ಲಾಡ್ಜ್ನಲ್ಲಿ ರೂಂ ಪಡೆದು ಆಕೆಯ ಮೇಲೆ ಅತ್ಯಾಚಾರ ನಡೆಸುತ್ತಾನೆ. ಅದೇ ದಿನ ರಾತ್ರಿ 8 ಗಂಟೆಗೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಕರೆದುಕೊಂಡು ಬಂದ ಆತ ಗರ್ಭ ನಿರೋಧಕ ಮಾತ್ರೆ ಎಂದು ಸೈನೈಡ್ ನೀಡಿ ಶೌಚಾಲಯಕ್ಕೆ ತೆರಳಿ ಸೇವಿಸುವಂತೆ ತಿಳಿಸುತ್ತಾನೆ. ಶೌಚಾಲಯದಲ್ಲಿ ಮೃತಪಟ್ಟ ಯುವತಿಯನ್ನು ಅಲ್ಲಿನ ಜನರು ಕೆ.ಆರ್.ಆಸ್ಪತ್ರೆಗೆ ದಾಖಲಿಸುತ್ತಾರೆ.ಆದರೆ ವೈದ್ಯರು ಪರೀಕ್ಷಿಸಿದಾಗ ಆಕೆ ಮೃತಪಟ್ಟಿರುವುದಾಗಿ ಹೇಳುತ್ತಾರೆ. ಮೃತದೇಹವನ್ನು ಯಾರೂ ಗುರುತಿಸದ ಕಾರಣ ಶವಾಗಾರದಲ್ಲಿ ಇರಿಸಲಾಗಿತ್ತು. ಬಳಿಕ ಮಾರ್ಚ್ 16ರಂದು ಪೋಸ್ಟ್ ಮಾರ್ಟಮ್ ಮಾಡಲಾಯಿತು.
ಯುವತಿಯ ಮನೆಯವರು ಎಲ್ಲಾ ಕಡೆ ಹುಡುಕಾಟ ನಡೆಸಿ, ಮಾರ್ಚ್ 17ರಂದು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಕಾಣೆಯಾಗಿದ್ದಾಳೆಂದು ದೂರು ದಾಖಲಿಸುತ್ತಾರೆ. ಆಕೆ ಮನೆಯಿಂದ ಹೋಗುವಾಗ ಮೊಬೈಲ್ ಫೋನನ್ನು ತೆಗೆದುಕೊಂಡು ಹೋಗಿದ್ದು, ಆದರೆ ಅದೂ ಸ್ವಿಚ್ ಆಫ್ ಆಗಿತ್ತು. ಕೆಲವು ಸಮಯಗಳ ನಂತರ ಆ ಫೋನ್ ಕರೆಯನ್ನು ಸ್ವೀಕರಿಸಿದ್ದು, ತಾನು ಈ ಫೋನನ್ನು ಕುಶಾಲಪ್ಪ ಎಂಬಾತನಿಂದ ಪಡೆದುಕೊಂಡಿದ್ದು, ತನ್ನ ಹೆಸರು ಸುದರ್ಶನ ಎಂದು ಹೇಳಿಕೊಂಡಿದ್ದ. ಆ ಸಂದರ್ಭ ಆತನಲ್ಲಿ ಯುವತಿಯ ಬಗ್ಗೆ ವಿಚಾರಿಸಿದಾಗ ಅವಳು ಹಾರಂಗಿ ಡ್ಯಾಂ ಹತ್ತಿರ ಇರುವ ಕೂಡ್ಲಿಗಿ ಫಾರ್ಮ್ನಲ್ಲಿ ಕೆಲಸ ಮಾಡುತ್ತಿದ್ದಾಳೆ ಎಂದು ಹೇಳಿದ್ದ.
ಮನೆಯವರು ಅಲ್ಲಿ ಹೋಗಿ ವಿಚಾರಿಸಿದಾಗ, ಯುವತಿ ಅಲ್ಲಿಗೆ ಹೋಗಲೇ ಇಲ್ಲ ಎಂಬ ಮಾಹಿತಿ ಲಭ್ಯವಾಗುತ್ತದೆ.ಬಳಿಕ ಯುವತಿಯೋರ್ವಳ ಕೊಲೆ ಸಂಬಂಧ ಮೋಹನ್ ಬಂಧನವಾದ ಬಳಿಕ ಈ ಯುವತಿಯನ್ನೂ ತಾನೇ ಕೊಲೆ ಮಾಡಿರುವುದಲ್ಲದೆ. ಉಳಿದ ಐವರು ಯುವತಿಯವರನ್ನು ಪರಿಚಯ ಮಾಡಿಕೊಳ್ಳಲು ಇದೇ ಸಿಮ್ ಬಳಸಿರುವುದಾಗಿ ಆತ ಹೇಳಿಕೊಂಡಿದ್ದ. ಈ ಸಿಮ್ ಯುವತಿಯ ತಮ್ಮನ ಹೆಸರಿನಲ್ಲಿತ್ತು. ಆಗಈ ಬಗ್ಗೆ ಪ್ರಕರಣ ದಾಖಲಾಗಿ ಸಿಒಡಿ ಡಿವೈಎಸ್ಪಿ ಚಾರ್ಜ್ ಶೀಟ್ ಸಲ್ಲಿಸಿ 44 ಸಾಕ್ಷಿಗಳು, 70 ದಾಖಲೆಗಳು ಹಾಗೂ 37 ಸಾಮಾಗ್ರಿಗಳನ್ನು ವಿಚಾರಣೆಗೆ ಪರಿಗಣಿಸಿದೆ. ಈ ಪ್ರಕರಣವನ್ನು ಕೈಗೆತ್ತಿಕೊಂಡ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೈನೈಡ್ ಮೋಹನ್ ಕುಮಾರ್ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆಯನ್ನು ಪ್ರಕಟಿಸಿದೆ.
ಎರಡೂ ಪ್ರಕರಣದ ಶಿಕ್ಷೆಯ ವಿವರ:
ಐಪಿಸಿ ಸೆಕ್ಷನ್ 366(ಅಪಹರಣ)ರಡಿ 6 ವರ್ಷ ಕಠಣ ಸಜೆ 3 ಸಾವಿರ ದಂಡ, ದಂಡ ತೆರಲು ತಪ್ಪಿದ್ದಲ್ಲಿ1 ತಿಂಗಳ ಸಜೆ, ಸೆಕ್ಷನ್ 376(ಅತ್ಯಾಚಾರ) ರಡಿ 7 ವರ್ಷ ಕಠಿಣ ಸಜೆ, 3 ಸಾವಿರ ದಂಡ,
ದಂಡ ತೆರಲು ತಪ್ಪಿದ್ದಲ್ಲಿ1 ತಿಂಗಳ ಸಜೆ, ಸೆಕ್ಷನ್ 417(ವಂಚನೆ) ರಡಿ 6 ವರ್ಷ ಕಠಿಣ ಸಜೆ, 3 ಸಾವಿರ ದಂಡ, ಸೆಕ್ಷನ್ 328(ವಿಷ ಉಣಿಸಿದ್ದಕ್ಕೆ) ರಡಿ 7 ವರ್ಷ ಕಠಿಣ ಸಜೆ, 3 ಸಾವಿರ ದಂಡ,
ದಂಡ ತೆರಲು ತಪ್ಪಿದ್ದಲ್ಲಿ1 ತಿಂಗಳ ಸಜೆ, ಸೆಕ್ಷನ್ 302(ಕೊಲೆ) ರಡಿ ಮರಣತನಕ ಜೀವಾವಧಿ ಶಿಕ್ಷೆ, ಸೆಕ್ಷನ್ 201(ಸಾಕ್ಷಿನಾಶ) ರಡಿ 5 ವರ್ಷಗಳ ಕಠಿಣ ಸಜೆ, 3 ಸಾವಿರ ದಂಡ, ಸೆಕ್ಷನ್ 392 (ಚಿನ್ನಾಭರಣ ಸುಲಿಗೆ) ರಡಿ 5 ವರ್ಷಗಳ ಕಠಿಣ ಸಜೆ, 3 ಸಾವಿರ ದಂಡ, ದಂಡ ತೆರಲು ತಪ್ಪಿದ್ದಲ್ಲಿ1 ತಿಂಗಳ ಸಜೆ ವಿಧಿಸಿ ತೀರ್ಪು ನೀಡಲಾಗಿದೆ.
ಕೊಲೆಯಾದ ಯುವತಿಯರ ಕುಟುಂಬವು ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ಪಡೆದುಕೊಳ್ಳಲು ಅರ್ಹರೆಂದು ತೀರ್ಪಿನಲ್ಲಿ ತಿಳಿಸಿದೆ.ನ್ಯಾಯಾಧೀಶ ಪುಟ್ಟರಂಗಸ್ವಾಮಿ ತೀರ್ಪು ಪ್ರಕಟಿಸಿದ್ದು, ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಜುಡಿತ್ ಎಂ. ಕ್ರಾಸ್ತಾ ವಾದಿಸಿದ್ದರು.ವೀಡಿಯೋ ಕಾನ್ಫರೆನ್ಸ್ ಮೂಲಕ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಆರೋಪಿ ಸೈನೈಡ್ ಮೋಹನ್ ಕುಮಾರ್ನನ್ನು ವಿಚಾರಣೆ ನಡೆಸಲಾಗಿತ್ತು.