ಮಂಗಳೂರು: ಅಗತ್ಯ ವಸ್ತುಗಳನ್ನು ದೇಶದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ತಲುಪಿಸುವ ಮಹತ್ವದ ಜವಾಬ್ದಾರಿಯನ್ನು ಗೂಡ್ಸ್ ಟ್ರಾನ್ಸ್ಪೋರ್ಟ್ ಉದ್ಯಮ ಹೊಂದಿದೆ. ಆದರೆ, ಕೊರೊನಾ - ಲಾಕ್ಡೌನ್ ಎಫೆಕ್ಟ್, ಇಂಧನ ಬೆಲೆ ಏರಿಕೆ ಮತ್ತು ಲಾರಿ ಚಾಲಕರ ಕೊರತೆಯಿಂದ ಈ ಉದ್ಯಮ ಈಗ ಸಂಕಷ್ಟಕ್ಕೆ ಸಿಲುಕಿದೆ. ಲಾರಿಗಳನ್ನು ಇಟ್ಟುಕೊಂಡು ಉದ್ಯಮ ನಡೆಸುತ್ತಿರುವವರು ಪರದಾಟ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ದೇಶದ ಮೂಲೆ ಮೂಲೆಗಳಿಂದ ಅಗತ್ಯ ವಸ್ತುಗಳನ್ನು ಅಗತ್ಯ ಇರುವೆಡೆಗೆ ತಲುಪಿಸಿ, ದೇಶದಲ್ಲಿ ಆಹಾರ ವಸ್ತುಗಳ ಕೊರತೆಯಾಗದಂತೆ ಗೂಡ್ಸ್ ಟ್ರಾನ್ಸ್ ಪೋರ್ಟ್ ಉದ್ಯಮ ಕಾರ್ಯ ನಿರ್ವಹಿಸುತ್ತಿದೆ. ಆದ್ರೆ ಇತ್ತೀಚೆಗೆ ಈ ಉದ್ಯಮ ಒಂದಿಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ.
ಲಾರಿ ಮಾಲೀಕರು ಏನಂತಾರೆ?
ಆಹಾರ ವಸ್ತುಗಳನ್ನು ಪೂರೈಕೆ ಮಾಡಲು ಲಾರಿಗಳು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಂಚರಿಸುತ್ತಿವೆ. ಒಂದು ಲಾರಿ 1,500 ಕಿಲೋ ಮೀಟರ್ ಸಂಚರಿಸಿ ಟ್ರಿಪ್ ಮಾಡುವುದಿದ್ದರೆ, ತಿಂಗಳಿಗೆ ಕನಿಷ್ಠ ಮೂರು ಟ್ರಿಪ್ ಆದರೆ, ಮಾತ್ರ ಮಾಲೀಕರಿಗೆ ಲಾಭದಾಯಕವಾಗಬಲ್ಲದು. ಆದರೆ, ಈಗಿನ ಪರಿಸ್ಥಿತಿಯಲ್ಲಿ ಎರಡು ಟ್ರಿಪ್ ಆಗುವುದೇ ಹೆಚ್ಚು ಎನ್ನುತ್ತಾರೆ ಲಾರಿ ಮಾಲೀಕರು.
ಒಂದು ಲಾರಿ ನಾಗಪುರದಿಂದ ಮಂಗಳೂರಿಗೆ ಆಹಾರ ವಸ್ತುಗಳನ್ನು ಲೋಡ್ ಮಾಡಿಕೊಂಡು ತಂದರೆ ಅವರು ಮಂಗಳೂರಿನಿಂದ ಲೋಡ್ ಮಾಡಿಕೊಂಡು ಮತ್ತೆ ಹೋಗಬೇಕಾದರೆ ಕನಿಷ್ಠ ನಾಲ್ಕು ದಿನ ಕಾಯಬೇಕಾಗುತ್ತದೆ. ಹೆಚ್ಚಾಗಿರುವ ಲಾರಿಗಳ ಸಂಖ್ಯೆಯಿಂದ ಲೋಡ್ ಆಗಲು ಕಾಯಬೇಕಾದ ಪರಿಸ್ಥಿತಿ ಇದೆ. 25 ಟನ್ನ ಲೋಡ್ಗೆ 10 ಲಾರಿಗಳು ಕಾಯುವ ಪರಿಸ್ಥಿತಿ ಬಂದಿದೆ.
ಇಂಧನ ದರದ ಎಫೆಕ್ಟ್:
ಇನ್ನೂ ಡೀಸೆಲ್ ದರ ಹೆಚ್ಚಳ ಲಾರಿ ಮಾಲೀಕರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ. ಸಾವಿರಾರು ಕಿಲೋ ಮೀಟರ್ ಪಯಣ ಮಾಡುವ ಲಾರಿಗಳಿಗೆ ಡೀಸೆಲ್ ಬೆಲೆ ಹೆಚ್ಚಳದಿಂದ ಹೆಚ್ಚುವರಿ ಹಣದ ಹೊರೆ ಬಿದ್ದಿದೆ.
ಚಾಲಕರ ಸಮಸ್ಯೆ:
ಲಾರಿ ಮಾಲೀಕರಿಗೆ ಸರಿಯಾದ ರೀತಿಯ ಚಾಲಕರು ಸಿಗುವುದೇ ಸಮಸ್ಯೆಯಾಗಿದೆ. ಲಾರಿಗಳಲ್ಲಿ ದುಡಿಯಲು ಮುಂದೆ ಬರುವ ಯುವಕರ ಸಂಖ್ಯೆ ಕ್ಷೀಣಿಸುತ್ತಿದೆ. ಮನೆ ಬಿಟ್ಟು ಮಳೆ, ಗಾಳಿ, ಚಳಿಗೆ ಹೊಂದಿಕೊಂಡು ಕೆಲಸ ಮಾಡಲು ಹಿಂದೇಟು ಹಾಕುವುದರಿಂದ ಸೂಕ್ತ ಚಾಲಕರಿಗೂ ಪರದಾಡುವಂತಾಗಿದೆ.
ಸಮಸ್ಯೆಯೇನು?
ಇನ್ನೂ ಲಾರಿಗಳಲ್ಲಿ ಚಾಲಕ ವೃತ್ತಿ ಮಾಡಲು ಹೆವಿ ಮೋಟಾರ್ ಟ್ರೈನಿಂಗ್ ನೀಡುವ ವ್ಯವಸ್ಥೆ ನಮ್ಮಲ್ಲಿಲ್ಲ. ಲಾಕ್ಡೌನ್ ಸಂದರ್ಭದಲ್ಲಿ ಗೂಡ್ಸ್ ಟ್ರಾನ್ಸ್ಪೋರ್ಟ್ ಉದ್ಯಮಕ್ಕೆ ಸಾಕಷ್ಟು ನಷ್ಟ ತಂದಿದೆ. ಜೊತೆಗೆ ಟೋಲ್ ಸುಂಕ, ರಾಷ್ಟ್ರೀಯ ಹೆದ್ದಾರಿ ಕೆಲವು ಕಡೆ ಪೊಲೀಸರು ಲಂಚಕ್ಕಾಗಿ ಕೈಚಾಚುವುದರಿಂದ ಹೆಚ್ಚುವರಿ ನಷ್ಟ ಆಗುತ್ತಿದೆ. ಲಾರಿಗಳಲ್ಲಿ ಬರುವ ಚಾಲಕರಂತೂ ಸುಮಾರು ದಿನಗಳ ಓಡಾಟದಲ್ಲಿ ಸರಿಯಾಗಿ ಕುಡಿಯುವ ನೀರಿನ ಲಭ್ಯವಿಲ್ಲದೇ ಪರದಾಡುವ ಸ್ಥಿತಿ ಇದೆ ಎನ್ನುತ್ತಾರೆ ಲಾರೀ ಮಾಲೀಕರು ಮತ್ತು ಚಾಲಕರು.
ಇದನ್ನೂ ಓದಿ: ಪೋಕ್ಸೋ ಪ್ರಕರಣದ ವಿಚಾರಣೆಗಾಗಿಯೇ ವಿಶೇಷ ಕೋರ್ಟ್ಗಳ ಸ್ಥಾಪನೆ.. ಹೇಗಿದೆ ಕಾರ್ಯವೈಖರಿ
ಗೂಡ್ಸ್ ಟ್ರಾನ್ಸ್ಪೋರ್ಟ್ ಉದ್ಯಮ ಸಂಕಷ್ಟದಲ್ಲಿದ್ದು ಇಂಧನ ಬೆಲೆ ಇಳಿಕೆ ಜೊತೆ ನಮ್ಮ ಸಮಸ್ಯೆಯತ್ತ ಗಮನ ಹರಿಸಬೇಕಾಗಿದೆ ಎಂದು ಗೂಡ್ಸ್ ಟ್ರಾನ್ಸ್ ಪೋರ್ಟ್ ಉದ್ದಿಮೆದಾರರು ಒತ್ತಾಯಿಸುತ್ತಿದ್ದಾರೆ.