ಸುಳ್ಯ: ಸ್ನಾನಕ್ಕೆಂದು ನದಿಗೆ ಇಳಿದಿದ್ದ ನಾಲ್ವರ ಪೈಕಿ ಓರ್ವ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಭಾನುವಾರ ಸಂಜೆ ತಾಲೂಕಿನಲ್ಲಿ ನಡೆದಿದೆ.
ಮೃತ ಬಾಲಕನನ್ನು ತಾಲೂಕಿನ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ, ದುಗಲಡ್ಕ ಬಳಿಯ ಕಮಿಲ ನಿವಾಸಿ ಹರೀಶ್ ಗೌಡ ಎಂಬುವರ ಪುತ್ರ ಯಶ್ವಿತ್ ಎಂದು ಗುರುತಿಸಲಾಗಿದೆ. ಯಶ್ವಿತ್ ಭಾನುವಾರದಂದು ತನ್ನ ಇತರ ಮೂವರು ಸ್ನೇಹಿತರೊಂದಿಗೆ ಸ್ನಾನಕ್ಕೆಂದು ಉಬರಡ್ಕ ನದಿಗೆ ತೆರಳಿದ್ದು, ಈ ವೇಳೆ ಕಿರಣ್ ಎಂಬ ಬಾಲಕ ನೀರಲ್ಲಿ ಮುಳುಗುವುದನ್ನು ಕಂಡ ಯಶ್ವಿತ್ ಮತ್ತು ಇತರ ಇಬ್ಬರು ಸೇರಿ ಕಿರಣ್ನನ್ನು ಮೇಲಕ್ಕೆತ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಸಮಯದಲ್ಲಿ ಯಶ್ವಿತ್ ನೀರಿನ ಆಳಕ್ಕೆ ಜಾರಿ ಬಿದ್ದು ಮೃತಪಟ್ಟದ್ದಾನೆ ಎನ್ನಲಾಗಿದೆ.
ಈ ವಿಷಯ ತಿಳಿದು ಊರವರು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮೃತದೇಹವನ್ನು ಮೇಲಕ್ಕೆತ್ತಲಾಗಿದ್ದು, ಈ ಬಗ್ಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಂತರ ಮನೆಯವರಿಗೆ ಹಸ್ತಾಂತರಿಸಲಾಗಿದೆ.