ಪುತ್ತೂರು: ಕೊರೊನಾ ಮಹಾಮಾರಿಯಿಂದ ಒಂದೊತ್ತಿನ ತುತ್ತಿಗೂ ಪರದಾಡುವ ಪರಿಸ್ಥಿತಿ ಎದುರಾಗುತ್ತಿದೆ ಎಂಬ ಭಯದಿಂದ ತುತ್ತಿನ ಚೀಲ ತುಂಬಿಸಲು ಇಲ್ಲಿನ ಪಡೀಲ್‌ನಲ್ಲಿ ವಾಸ್ತವ್ಯ ಇದ್ದ 18 ಮಂದಿ ಉತ್ತರ ಪ್ರದೇಶ ಮೂಲದ ಕಾರ್ಮಿಕರು ಊರಿಗೆ ಕಾಲ್ನಡಿಗೆಯಲ್ಲೇ ತೆರಳುತ್ತಿದ್ದರು. ಈ ವೇಳೆ ಪುತ್ತೂರು ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾಲ್, ಕಾರ್ಮಿಕರನ್ನು ತಡೆದು ಸೂಕ್ತ ವ್ಯವಸ್ಥೆ ಮಾಡಿದ್ದಾರೆ.
ಪಡೀಲ್‌ನಲ್ಲಿರುವ ಹಂಚಿನ ಮನೆಯೊಂದರಲ್ಲಿ ಸುಮಾರು 24 ಮಂದಿ ಉತ್ತರ ಪ್ರದೇಶ ಮೂಲಕ ಕಾರ್ಮಿಕರು ವಾಸ್ತವ್ಯ ಇದ್ದು, ಸ್ಥಳೀಯ ಗುತ್ತಿಗೆದಾರರ ಮೂಲಕ ಅವರೆಲ್ಲ ಕಾಂಕ್ರೀಟ್, ಗಾರೆ ಕೆಲಸಕ್ಕೆ ಹೋಗುತ್ತಿದ್ದರು. ಆದರೆ ಇತ್ತೀಚೆಗೆ ಬಂದ ಕೊರೊನಾ ಮಹಾಮಾರಿಯಿಂದಾಗಿ ದೇಶವೇ ಲಾಕ್‌ಡೌನ್ ಆಗಿದೆ.
ಈ ನಡುವೆ ಅವರಿಗೆ ಕೆಲಸವೂ ಇಲ್ಲದೆ, ಊಟಕ್ಕೂ ಗತಿಯಿಲ್ಲದ ಪರಿಸ್ಥಿತಿ ನಿರ್ಮಾಣ ಆಗಿತ್ತು. 24 ಮಂದಿಯಲ್ಲಿ 18 ಮಂದಿ ಕೂಲಿ ಕಾರ್ಮಿಕರು ಊರಿಗೆಂದು ಉಪ್ಪಿನಂಗಡಿ ಮಾರ್ಗವಾಗಿ ಕಾಲ್ನಡಿಗೆಯಲ್ಲೇ ಹೊರಟಿದ್ದರು. ಅವರು ಕೋಡಿಂಬಾಡಿ ತಲುಪುತ್ತಲೇ ಮಾಹಿತಿ ತಿಳಿದ ಪುತ್ತೂರು ಸಹಾಯಕ ಕಮೀಷನರ್ ಡಾ. ಯತೀಶ್ ಉಳ್ಳಾಲ್, ಸ್ಥಳಕ್ಕೆ ದೌಡಾಯಿಸಿ ಕಾರ್ಮಿಕರ ಮನವೊಲಿಸಿ ದಣಿದ ಕಾರ್ಮಿಕರಿಗೆ ಸಹಾಯ ಮಾಡಿದ್ದಾರೆ.
ಅವರನ್ನು ಪುನಃ ಪಡೀಲ್‌ನಲ್ಲಿರುವ ಅವರ ವಾಸ್ತವ್ಯದ ಮನೆಗೆ ಬಿಟ್ಟಿದ್ದಾರೆ. ನಾಳೆ ಅವರಿಗೆ ದಿನಸಿ ಸಾಮಾಗ್ರಿಗಳನ್ನು ತಲುಪಿಸುವ ಭರವಸೆ ನೀಡಿದ್ದಾರೆ.