ಉಳ್ಳಾಲ: ವಿಶ್ವದಲ್ಲಿ ಹಿಂದೂ ಧರ್ಮ ಬಿಟ್ಟರೆ ಬೇರೆಲ್ಲವೂ ಮತಗಳು. ಅವರವರ ಮತಿಗೆ ಸಂಬಂಧಿಸಿದ ಮತಗಳಾಗಿವೆ. ಸೆಕ್ಯುಲರಿಸಂ ಎನ್ನುವ ಮೂಲ ಅರ್ಥ ಬದಲಾವಣೆಯಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿ ಮಂಗಳೂರು ಮಂಡಲದ ವತಿಯಿಂದ ಕಾಪಿಕಾಡು ನಿರ್ವಿಕಲ್ಪ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡ ಬಿಜೆಪಿ ಮಂಗಳೂರು ಮಂಡಲ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರೀಯ ಸಮಗ್ರತೆ, ಗಾಂಧಿ ಪ್ರಣೀತ ಸಮಾಜವಾದ, ಸರ್ವಪಂಥ ಸಮಭಾವ, ಪ್ರಜಾಪ್ರಭುತ್ವದಲ್ಲಿ ನಂಬಿಕೆ, ಮೌಲ್ಯಾಧಾರಿತ ರಾಜಕಾರಣ ಸಿದ್ಧಾಂತಗಳ ಮೇಲೆ ಬಿಜೆಪಿ ಕಾರ್ಯಕರ್ತರು ಮುನ್ನಡೆಯಬೇಕಿದೆ ಎಂದರು.
ಬಿಜೆಪಿ ಭಿನ್ನ ಪಕ್ಷವಾಗಿ ಹೊರಹೊಮ್ಮುವ ಮೂಲಕ ಭಿನ್ನ ಆಡಳಿತವನ್ನು ದೇಶಕ್ಕೆ ನೀಡಿದೆ. ಈ ಮೂಲಕ ತಾಯಿ ಭಾರತಾಂಬೆಯನ್ನು ಪರಮ ವೈಭವಕ್ಕೆ ತಲುಪಿಸುವ ಕಲ್ಪನೆ ಎಲ್ಲರಲ್ಲಿ ಉಳಿಯಬೇಕು. ಬಿಜೆಪಿಯೆಂದಲ್ಲಿ ದೇಶಕ್ಕಾಗಿ ಪಕ್ಷವನ್ನೇ ವಿಸರ್ಜನೆ ಮಾಡಿದವರು, ರಾಷ್ಟ್ರದ ಹಿತಾಸಕ್ತಿಯ ಪ್ರಶ್ನೆ ಬಂದಾಗ ತ್ಯಾಗ ಮಾಡಿದವರು ಎಂದ ಅವರು, ಉಳ್ಳಾಲದಂತಹ ಹಲವು ಕಡೆಗಳಲ್ಲಿ ಪ್ರತ್ಯೇಕವಾದದ ಕೂಗಿದೆ.
ಭಾರತೀಯ ರಾಷ್ಟ್ರೀಯ ವಿಚಾರಧಾರೆಯನ್ನು ಬಿಂಬಿಸುವ ನೂತನ ಶಿಕ್ಷಣ ನೀತಿ ಕೇಂದ್ರ ಶೀಘ್ರದಲ್ಲೇ ಜಾರಿಗೊಳಿಸಲಿದೆ. ರಾಷ್ಟ್ರೀಯ ಸಮಗ್ರತೆ, ಆತ್ಮವಿಶ್ವಾಸ, ಉದ್ಯೋಗ ಸೃಷ್ಟಿ ಮಾಡುವ ಯೋಜನೆಗಳು, ಸ್ವಚ್ಛ ಭಾರತದ ಕಲ್ಪನೆಗಳು ಪರಿಣಾಮಕಾರಿಯಾಗಿ ಜಾರಿಯಾಗಲಿವೆ ಎಂದರು.