ಸುಬ್ರಹ್ಮಣ್ಯ (ದಕ್ಷಿಣ ಕನ್ನಡ) : ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಅನ್ನದಾನ ಸೇವೆಗೆ ತೆಲಂಗಾಣದ ಸಚಿವ ಶ್ರೀನಿವಾಸ ರೆಡ್ಡಿ ಅವರು 1 ಕೋಟಿ ರೂ.ಗಳನ್ನು ಹರಕೆ ರೂಪದಲ್ಲಿ ನೀಡಿದ್ದಾರೆ. ಶ್ರೀನಿವಾಸ ರೆಡ್ಡಿ ಅವರು ತಮ್ಮ ಮಗಳ ಮದುವೆಗಾಗಿ ಮಾಡಿದ ಪ್ರಾರ್ಥನೆ ಫಲಿಸಿದ ಕಾರಣ ಡಿ.19 ರಂದು ಹರಕೆ ಪೂರೈಸಿದ್ದಾರೆ.
ಇಂದು ಕುಟುಂಬ ಸಮೇತರಾಗಿ ಶ್ರೀನಿವಾಸ ರೆಡ್ಡಿ ಅವರು ಸುಬ್ರಹ್ಮಣ್ಯಕ್ಕೆ ಬಂದು ತಮ್ಮ ಸೇವೆಯನ್ನು ನೆರವೇರಿಸಿದರು. ಈ ಸಂದರ್ಭ ಅವರೊಂದಿಗೆ ಮಗಳು, ಅಳಿಯ, ಸಹೋದರ ಹಾಗೂ ತಿರುಪತಿಯಲ್ಲಿ ಪ್ರೋಫೆಸರ್ ಆಗಿರುವ ಗಣಪತಿ ಭಟ್ ಉಪಸ್ಥಿತರಿದ್ದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ. ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪಿ.ಜಿ.ಎಸ್.ಎನ್ ಪ್ರಸಾದ್, ಪ್ರಸನ್ನ ದರ್ಭೆ, ಶ್ರೀವತ್ಸಾ, ಲೋಕೇಶ್ ಮುಂಡಕಜೆ, ಶೋಭಾ ಗಿರಿಧರ್, ವನಜಾ ಭಟ್ ಮತ್ತಿತರಿದ್ದು ಚೆಕ್ ಮೂಲಕ ಮೊತ್ತವನ್ನು ಸ್ವೀಕರಿಸಲಾಯಿತು.
ಕುಕ್ಕೆ ಸುಬ್ರಹ್ಮಣ್ಯಕ್ಕೆ ಮಾಜಿ ಪ್ರಧಾನಿ ಭೇಟಿ : ಇದೇ ವರ್ಷ ಅಕ್ಟೋಬರ್ನಲ್ಲಿ ಮಾಜಿ ಪ್ರಧಾನಮಂತ್ರಿ ಹಾಗೂ ರಾಜ್ಯ ಸಭಾ ಸಂಸತ್ ಸದಸ್ಯರಾದ ಹೆಚ್.ಡಿ ದೇವೇಗೌಡ ಮತ್ತು ಪತ್ನಿ ಚನ್ನಮ್ಮ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ವಿಶೇಷ ಪೂಜೆಗಳನ್ನು ನೆರವೇರಿಸಿದ್ದರು. ತುಲಾಭಾರ ಸೇವೆ, ಆಶ್ಲೇಷ ಬಲಿ, ನಾಗ ಪ್ರತಿಷ್ಟೆ ಸೇರಿದಂತೆ ವಿಶೇಷ ಪೂಜೆಗಳಲ್ಲಿ ಭಾಗವಹಿಸಿದ್ದರು. ಬಳಿಕ ಬೆಂಗಳೂರಿಗೆ ವಾಪಸ್ ಆಗಿದ್ದರು.
ಎಡೆಸ್ನಾನ ಸೇವೆ ನೆರವೇರಿಸಿದ ಭಕ್ತರು : ವಿಶ್ವಪ್ರಸಿದ್ಧ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಚೌತಿಯ ದಿನವಾದ ಡಿ.16ರ ಶನಿವಾರದಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರು ಎಡೆಸ್ನಾನ ಸೇವೆ ನೆರವೇರಿಸಿದ್ದರು. ಗೋವುಗಳು ಸೇವಿಸಿದ ನೈವೇದ್ಯದ ಎಲೆಯ ಮೇಲೆ ಭಕ್ತರು ಉರುಳು ಸೇವೆ ನಡೆಸುವ ಮೂಲಕ ಚಂಪಾಷಷ್ಠಿಯ ಜಾತ್ರೋತ್ಸವದ ಚೌತಿಯ ದಿನದಂದು ಎಡೆಸ್ನಾನ ಹರಕೆ ಸೇವೆ ಸಲ್ಲಿಸಿದ್ದರು. ಸುಮಾರು 95 ಭಕ್ತರು ಸ್ವಯಂಪ್ರೇರಿತರಾಗಿ ಸೇವೆ ನೆರವೇರಿಸಿದ್ದರು. ಅಲ್ಲದೆ, ಪಂಚಮಿ ಮತ್ತು ಷಷ್ಠಿಯಂದು ಭಕ್ತರು ಎಡೆಸ್ನಾನ ಸೇವೆ ನೆರವೇರಿಸಲಿದ್ದರು.
ಧಾರ್ಮಿಕ ದತ್ತಿ ಇಲಾಖೆಯ ಶೈವಾಗಮ ಪಂಡಿತರ ಮಾರ್ಗದರ್ಶನದಂತೆ ಶ್ರೀ ದೇವರ ಮಧ್ಯಾಹ್ನದ ಮಹಾಪೂಜೆ ಬಳಿಕ ದೇವಳದ ಹೊರಾಂಗಣದ ಸುತ್ತಲೂ 432 ಬಾಳೆ ಎಲೆಗಳನ್ನು ಹಾಕಿ ಅದರ ಮೇಲೆ ದೇವರ ನೈವೇದ್ಯಗಳನ್ನು ಬಡಿಸಲಾಗಿತ್ತು. ಬಳಿಕ ದೇವಳದ ಗೋವುಗಳು ಆ ಎಲೆಗಳಲ್ಲಿದ್ದ ಅನ್ನಪ್ರಸಾದವನ್ನು ತಿಂದವು. ಹಸುಗಳು ತಿಂದ ಅನ್ನಪ್ರಸಾದದ ಮೇಲೆ ದೇವಳದ ಎದುರಿನ ದರ್ಪಣತೀರ್ಥ ನದಿಯಲ್ಲಿ ಸ್ನಾನ ಮಾಡಿ ಬಂದು ನಿಂತಿದ್ದ ಎಲ್ಲಾ ವಯೋಮಾನದ ಭಕ್ತರು ಉರುಳು ಸೇವೆ ಕೈಗೊಂಡು ಒಂದು ಸುತ್ತು ಪ್ರದಕ್ಷಿಣೆ ಹಾಕಿದ್ದರು. ಬಳಿಕ ಭಕ್ತರು ದರ್ಪಣ ತೀರ್ಥ ನದಿಯಲ್ಲಿ ಸ್ನಾನ ಮಾಡಿ ಶ್ರೀ ದೇವರ ಪ್ರಸಾದ ಮತ್ತು ಪ್ರಸಾದ ಭೋಜನವನ್ನು ಸ್ವೀಕರಿಸಿದ್ದರು. ತನ್ನ ಒಳಿತಿಗಾಗಿ ಹಿರಿಯರು ಹೇಳಿದ ಹರಕೆಯಂತೆ ಪುಟ್ಟ ಬಾಲಕಿಯೋರ್ವಳು ಎಡೆಸ್ನಾನ ಹರಕೆಯನ್ನು ನೆರವೇರಿಸಿದ್ದಳು
ಇದನ್ನೂ ಓದಿ : ಕುಕ್ಕೆ ಸುಬ್ರಹ್ಮಣ್ಯನಿಗೆ ಚಂಪಾಷಷ್ಠಿ ವೈಭವ: ಬ್ರಹ್ಮರಥ ನೋಡುವುದೇ ಮಹಾಭಾಗ್ಯ